ದಿನಾಂಕ 17 ಬಂದರೂ ಸಂಬಳವಿಲ್ಲದೆ ಬಿಬಿಎಂಪಿ ಅಧಿಕಾರಿಗಳು, ನೌಕರರ ಪರದಾಟ

ಈ ಸುದ್ದಿಯನ್ನು ಶೇರ್ ಮಾಡಿ

BBMP--01
ಬೆಂಗಳೂರು, ಜು.17- ಮೇಲಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ದಿನಾಂಕ 17 ಆದರೂ ವೇತನವಾಗದೆ ಬಿಬಿಎಂಪಿ ಅಧಿಕಾರಿಗಳು, ನೌಕರರು ಪರದಾಡುವಂತಾಗಿದೆ. ಸಾಮಾನ್ಯವಾಗಿ ಪ್ರತಿ ತಿಂಗಳ 10ನೆ ತಾರೀಖಿಗೆ ವೇತನವಾಗುತ್ತಿತ್ತು. ಆದರೆ, ಈ ಬಾರಿ 17 ಆಗುತ್ತ ಬಂದರೂ ವೇತನ ಸಿಕ್ಕಿಲ್ಲ.  ವೇತನ ಪರಿಷ್ಕರಣೆ ಆಗಿರುವುದರಿಂದ ಇದನ್ನು ಕಂಪ್ಯೂಟರ್‍ಗೆ ಅಪ್‍ಡೇಟ್ ಮಾಡಬೇಕಿದೆ. ಇದಕ್ಕೆ ಒಂದೆರಡು ದಿನಗಳಷ್ಟೇ ಸಾಕು. ಆದರೆ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಡವಾಡೆ ಅಧಿಕಾರಿಗಳು ಹೊರಗುತ್ತಿಗೆ ಮೇಲೆ ಬಂದವರು. ಇವರುಗಳ ನಿರ್ಲಕ್ಷ್ಯದಿಂದಾಗಿ ವೇತನ ಇನ್ನೂ ಕೈಗೆ ಸಿಗದಂತಾಗಿದೆ.

ವೇತನವನ್ನೇ ನಂಬಿಕೊಂಡಿರುವ ಎಲ್ಲ ನೌಕರರು, ಅಧಿಕಾರಿಗಳು ಮಕ್ಕಳ ಫೀಜ್ ಕಟ್ಟಲಾಗದೆ, ಮನೆಗೆ ದಿನಸಿ, ತರಕಾರಿ ತರಲಾರದೆ ಪರದಾಡುತ್ತಿದ್ದಾರೆ. ದಿನನಿತ್ಯದ ಖರ್ಚುಗಳಿಗೂ ಹಣವಿಲ್ಲದೆ ಕಂಡ ಕಂಡವರ ಬಳಿ ಸಾಲ ಕೇಳುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಪೌರ ಕಾರ್ಮಿಕರಿಗೆ ಇನ್ನೂ ಏಕೆ ವೇತನ ಕೊಟ್ಟಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಮೇಯರ್ ಸಂಪತ್‍ರಾಜ್ ಅವರು ಪಾಲಿಕೆ ಸಿಬ್ಬಂದಿಗಳ ಬಗ್ಗೆ ಏಕೆ ಕಾಳಜಿ ವಹಿಸುವುದಿಲ್ಲ..? ಆನ್‍ಲೈನ್‍ನಲ್ಲಿ ವೇತನ ಅಪ್‍ಡೇಟ್ ಆಗುವುದು ತಡವಾಗುತ್ತದೆ. ಆದ್ದರಿಂದ ಹಳೆ ವೇತನವನ್ನು ತಕ್ಷಣಕ್ಕೆ ಕೊಟ್ಟುಬಿಡಿ. ಪರಿಷ್ಕರಿಸಿದ ವೇತನವನ್ನು ನಂತರ ಕೊಡಿ ಎಂದು ನೌಕರರು ದುಂಬಾಲು ಬಿದ್ದಿದ್ದಾರೆ. ಆದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ವೇತನ ಕೊಡಲು ತಿಂಗಳಾಂತ್ಯ ಆಗಬಹುದೇನೋ ಎಂದು ಹೇಳುತ್ತಿದ್ದು, ಸಿಬ್ಬಂದಿ ಏನು ಮಾಡುವುದೆಂದು ತಿಳಿಯದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

Facebook Comments

Sri Raghav

Admin