ಬೆಂಗಳೂರಲ್ಲಿ ವಿದೇಶಿಯರಿಗೆ ಬಾಡಿಗೆಗೆ ಮನೆ ಕೊಡುವ ಮುನ್ನ ಎಚ್ಚರ..!

ಈ ಸುದ್ದಿಯನ್ನು ಶೇರ್ ಮಾಡಿ

police
ಬೆಂಗಳೂರು, ಜು.17- ವಿದೇಶದಿಂದ ಬಂದು ಬೆಂಗಳೂರಿನಲ್ಲಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್‍ವೊಂದನ್ನು ಬಂಧಿಸಿರುವ ಜಯನಗರ ಠಾಣೆ ಪೊಲೀಸರು ಅವರಿಂದ 80 ಲಕ್ಷ ರೂ. ಮೌಲ್ಯದ ವಜ್ರ, ಚಿನ್ನಾಭರಣ, ಬೆಲೆಬಾಳುವ ವಾಚ್‍ಗಳು ಹಾಗೂ ವಿದೇಶಿ ಕರೆನ್ಸಿ ಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಐದು ಜನ ಕೊಲಂಬಿಯಾ ದೇಶದ ಪ್ರಜೆಗಳನ್ನು ಬಂಧಿಸುವ ಮೂಲಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಗೌರಿಬಿದನೂರಿನ ಮಾಜಿ ಶಾಸಕರ ಮನೆ ಹಾಗೂ ಪ್ರೈಡ್ ಹೊಟೇಲ್ ಸೇರಿದಂತೆ 6 ಪ್ರಮುಖ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರಾದ ಟಿ.ಸುನೀಲ್‍ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

colambia-rob-gang

ಬಂಧಿತ ಆರೋಪಿಗಳು ಕೊಲಂಬಿಯಾ ದೇಶದವರಾಗಿದ್ದು, ಹೈಸ್ಕೂಲ್‍ವರೆಗೆ ವಿದ್ಯಾಭ್ಯಾಸ ಮಾಡಿ ಹೋಲ್‍ಸೇಲ್ ಗಾರ್ಮೆಂಟ್ಸ್ ಅಂಗಡಿ ಹೊಂದಿದ್ದ ಜೋಸ್ ಎಡ್ವರ್ಡ್ ಅರಿವಾಲೋ ಬರ್ಬಾನೋ (40), ಎಂಬಿಎ ಪದವೀಧರನಾಗಿದ್ದ ಗುಸ್ರಾವೋ ಅಡಾಲ್ಫೋ ಜರಾಮಿಲ್ಲೋ ಜಿರಾಲ್ಲೋ (47), ಹೈಸ್ಕೂಲ್‍ವರೆಗೂ ಓದಿ ವೆಲ್ಡಿಂಗ್ ಟ್ರೈನಿಂಗ್ ಪಡೆದಿದ್ದ ಯಾಯಿರ್ ಆಲ್ಬರ್ಟೋ ಸ್ಯಾಂಚಿಯಸ್ ಅಲಿಯಾಸ್ ರೋಝರ್ ಸ್ಮಿತ್ ಡ್ಯುಆರ್ಟೆ ಅಲಿಯಾಸ್ ಪೈಸಾ (45), ಫುಡ್ ಹ್ಯಾಂಡ್ಲಿಂಗ್ ಕೋರ್ಸ್ ಮಾಡಿದ್ದ ಎಡ್ವರ್ಡ್ ಎಲೆಕ್ಸಿಸ್ ಗಾರ್ಸಿಯಾ ಪರಮೋ (38), ಇಂಟರ್‍ನ್ಯಾಷನಲ್‍ಬ್ಯುಸಿನೆಸ್ ಟೆಕ್ನಾಲಜಿ ಪದವಿ ಓದಿ ಅರ್ಧಕ್ಕೇ ಓದು ನಿಲ್ಲಿಸಿದ್ದ ಶ್ರೀಮತಿ ಕಿಂಬರ್ಲಿ ಗುಟಿಯಾರೀಸ್ ಅವರುಗಳನ್ನು ಬಂಧಿಸಲಾಗಿದೆ ಎಂದು ಅವರು ವಿವರಿಸಿದರು.

ಆರೋಪಿಗಳ ಪತ್ತೆ ಹಚ್ಚಿದ ತಂಡ:
ವಿದೇಶಿ ತಂಡವನ್ನು ಪತ್ತೆ ಹಚ್ಚಲು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪದ್ಧತಿಗಳನ್ನು ಪೊಲೀಸರು ಅನುಸರಿಸಿದ್ದಾರೆ. ಸಿಸಿ ಟಿವಿ ಫುಟೇಜ್ ಪರಿಶೀಲಿಸಿದಾಗ ಜುಲೈನಲ್ಲಿ ಜಯನಗರ ಠಾಣಾ ವ್ಯಾಪ್ತಿಯಲ್ಲಿ ಸುತ್ತಾಡುತ್ತಿರುವ ಮಾಹಿತಿ ಲಭ್ಯವಾಗಿದೆ.  ಅದನ್ನು ಆಧರಿಸಿ ಕಳ್ಳತನವಾದ ಮನೆಗಳಲ್ಲಿ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಯಿತು. ಒಎಲ್‍ಎಕ್ಸ್, ಫ್ಲಿಪ್‍ಕಾರ್ಡ್, ಅಮೆಜಾನ್‍ನಂತಹ ವೆಬ್‍ಸೈಟ್‍ಗಳನ್ನು ತೀವ್ರವಾಗಿ ಪರಿಶೀಲಿಸಲಾಯಿತು. ಹಾಗಾಗಿ ಆರೋಪಿಗಳ ಜಾಡು ಹಿಡಿದು ಡಿಸಿಪಿ ಡಾ.ಶರಣಪ್ಪ ನೇತೃತ್ವದಲ್ಲಿ ಎಸಿಪಿ ಎಚ್.ಶ್ರೀನಿವಾಸ್, ಪಿಐ ಎಸ್.ಟಿ.ಉಮಾಮಹೇಶ್, ನಾಗೇಶ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದು, ಅವರಿಗೆ ಒಂದು ಲಕ್ಷ ರೂ. ನಗದು ಬಹುಮಾನ ನೀಡಿ ಗೌರವಿಸುತ್ತಿರುವುದಾಗಿ ಆಯುಕ್ತರು ತಿಳಿಸಿದರು.

ಸಾರ್ವಜನಿಕರಿಗೆ ಮುನ್ನೆಚ್ಚರಿಕೆ:
ವಿದೇಶಿ ಪ್ರಜೆಗಳು ಬೆಂಗಳೂರಿಗೆ ಬಂದಾಗ ಅವರಿಗೆ ಮನೆ ಬಾಡಿಗೆಗೆ ಕೊಡುವ ಮಾಲೀಕರು ವಿದೇಶಿ ಪ್ರಜೆಗಳ ಪಾಸ್‍ಪೋರ್ಟ್ ಹಾಗೂ ವೀಸಾ ಅವಧಿಯನ್ನು ಪರಿಶೀಲಿಸಬೇಕು. ಅದರ ಜೆರಾಕ್ಸ್ ಪ್ರತಿಗಳನ್ನು ಪಡೆದುಕೊಂಡು ಮನೆ ಬಾಡಿಗೆ ಕರಾರು ಪತ್ರದೊಂದಿಗೆ ದಾಖಲೆಗಳನ್ನು ಸಮೀಪದ ಪೊಲೀಸ್ ಠಾಣೆಗೆ ಸಲ್ಲಿಸಿ ಮಾಹಿತಿ ನೀಡಬೇಕು. ಕೊಲಂಬಿಯಾ ದೇಶದ ಪ್ರಜೆಗಳಿಗೆ ಮನೆ ಬಾಡಿಗೆಗೆ ಕೊಟ್ಟಿರುವ ಮಾಲೀಕರು ಈ ರೀತಿಯ ನಿಯಮಗಳನ್ನು ಅನುಸರಿಸಿಲ್ಲ. ಅವರ ವಿರುದ್ಧ ಕ್ರಮ ಜರುಗಿಸುತ್ತೇವೆ. ಆರೋಪಿಗಳಿಗೆ ಫ್ರೀಪೇಯ್ಡ್ ಸಿಮ್ ಮಾರಾಟ ಮಾಡಿರುವವರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ತಿಳಿಸಿದರು. ಇನ್ನು ಮುಂದೆ ವಿದೇಶಿಗರೊಂದಿಗೆ ವ್ಯವಹರಿಸುವಾಗ ನಾಗರಿಕರು ಎಚ್ಚರಿಕೆಯಿಂದಿರಬೇಕು ಮತ್ತು ಸಮೀಪದ ಠಾಣೆಗೆ ಮಾಹಿತಿ ನೀಡಬೇಕು ಎಂದು ಅವರು ಸೂಚಿಸಿದ್ದಾರೆ.

Facebook Comments