ರಾಷ್ಟ್ರರಾಜಕಾರಣಕ್ಕೆ ಎಂಟ್ರಿ ಕೊಟ್ಟು ಪಕ್ಷದಲ್ಲಿ ಮತ್ತಷ್ಟು ಸ್ಟ್ರಾಂಗ್ ಆದ ಸಿದ್ದರಾಮಯ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01

ಬೆಂಗಳೂರು. ಜು.17 : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯನ್ನು ರಚನೆ ಮಾಡಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಿತಿಯಲ್ಲಿ ಸ್ಥಾನ ಪಡೆದಿದ್ದು, ರಾಷ್ಟ್ರರಾಜಕಾರಣಕ್ಕೆ ಮೊದಲ ಹೆಜ್ಜೆ ಇಟ್ಟಿದ್ದಾರೆ. ಮಂಗಳವಾರ ರಾಹುಲ್ ಗಾಂಧಿ ಎಐಸಿಸಿ ವರ್ಕಿಂಗ್ ಕಮಿಟಿ ರಚನೆ ಮಾಡಿ ಆದೇಶ ಹೊರಡಿಸಿದ್ದಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ಗುಲಾಂ ನಬಿ ಆಜಾರ್ ಸೇರಿದಂತೆ 23 ಸದಸ್ಯರು ಸಮಿತಿಯಲ್ಲಿದ್ದಾರೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಸಮಿತಿಗೆ ಸೇರಿಸಿಕೊಳ್ಳಲಾಗಿದೆ. ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡೀಸ್ ಅವರ ಬದಲು ಸಿದ್ದರಾಮಯ್ಯ ಅವರಿಗೆ ಸ್ಥಾನ ನೀಡಲಾಗಿದೆ. ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸೇರುವ ಮೂಲಕ ಸಿದ್ದರಾಮಯ್ಯ ಅವರು ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಹೆಚ್ಚಿಸಿಕೊಂಡಿದ್ದಾರೆ. ಸಮಿತಿ ಸೇರುವ ಮೂಲಕ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣದತ್ತ ಮೊದಲ ಹೆಜ್ಜೆ ಇಟ್ಟಿದ್ದಾರೆ.

ಮಲ್ಲಿಕಾರ್ಜುನ ಖರ್ಗೆಗೆ ರಾಹುಲ್‌ ಗಾಂಧಿ ನೀಡಿದ್ದಾರೆ ಹೊಸ ಜವಾಬ್ದಾರಿ ಹಿರಿಯ ಮತ್ತು ಕಿರಿಯ ನಾಯಕರನ್ನು ಒಳಗೊಂಡ ಸಮಿತಿಯನ್ನು ರಾಹುಲ್ ಗಾಂಧಿ ರಚನೆ ಮಾಡಿದ್ದಾರೆ. ಜು.22ರಂದು ಸಮಿತಿ ಮೊದಲ ಸಭೆ ನಡೆಯಲಿದೆ. ಕಾಂಗ್ರೆಸ್‌ ಪಕ್ಷದ ಎಲ್ಲಾ ಪ್ರಮುಖ ನಿರ್ಧಾರವನ್ನು ವರ್ಕಿಂಗ್ ಕಮಿಟಿ ಸಭೆಯ ಬಳಿಕ ತೆಗೆದುಕೊಳ್ಳಲಾಗುತ್ತದೆ.  ಈ ಸಿಡಬ್ಲ್ಯೂಸಿಗೆ ರಾಹುಲ್‌ಗಾಂಧಿ ಅಧ್ಯಕ್ಷರಾಗಿದ್ದರೆ, ಸೋನಿಯಾಗಾಂಧಿ, ಮಾಜಿ ಪ್ರಧಾನಿ ಡಾ. ಮನಮೋಹನ್‌ಸಿಂಗ್, ಮೋತಿಲಾಲ್ ವೋರಾ, ಗುಲಾಂ ನಬಿ ಆಜಾದ್, ಅಂಬಿಕಾ ಸೋನಿ, ಅಹ್ಮದ್ ಪಟೇಲ್, ಸಿದ್ದರಾಮಯ್ಯ ಸೇರಿದಂತೆ ಒಟ್ಟು 23 ಸದಸ್ಯರನ್ನು ನೇಮಕ ಮಾಡಲಾಗಿದೆ. ಶಾಶ್ವತ ಆಹ್ವಾನಿತರಲ್ಲಿ ಕರ್ನಾಟಕದ ಯಾವೊಬ್ಬ ನಾಯಕರಿಗೂ ಅವಕಾಶ ಸಿಕ್ಕಿಲ್ಲ. ಆದರೆ, ವಿಶೇಷ ಆಹ್ವಾನಿತರಾಗಿ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಅವರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜ್ಯದಲ್ಲಿ ಸಿದ್ದರಾಮಯ್ಯ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲನುಭವಿಸಿದರೂ ಹೈಕಮಾಂಡ್ ಪಾಲಿಗೆ ಸಿದ್ದರಾಮಯ್ಯ ಅವರೇ ರಾಜ್ಯದ ನಾಯಕನೆನಿಸಿದ್ದರು. ಈ ಕಾರಣದಿಂದಲೇ ಸಮ್ಮಿಶ್ರ ಸರಕಾರ ರಚನೆ, ಸಂಪುಟ ವಿಸ್ತರಣೆ ಸೇರಿದಂತೆ ಪ್ರಮುಖ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಿದ್ದರಾಮಯ್ಯ ಅವರ ಅಭಿಪ್ರಾಯ ಪಡೆದ ನಂತರವೇ ಹೈಕಮಾಂಡ್ ಮುಂದಿನ ಹೆಜ್ಜೆ ಇಟ್ಟಿತ್ತು. ಇದಲ್ಲದೇ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿಯೂ ನೇಮಕ ಮಾಡಿ ಅವರಿಗೊಂದು ಸೂಕ್ತ ಸ್ಥಾನಮಾನ ನೀಡಿ ಗೌರವಿಸಿತ್ತು.ಇದೀಗ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಹುದ್ದೆ ನೀಡಿರುವುದು ಸಿದ್ದರಾಮಯ್ಯ ಅವರ ವರ್ಚಸ್ಸು ಇಮ್ಮಡಿಯಾಗಲು ಕಾರಣವಾಗಲಿದೆ. ಈ ಮೂಲಕ ರಾಜ್ಯ ರಾಜಕಾರಣಕ್ಕೆ ಸೀಮಿತವಾಗಿದ್ದ ಸಿದ್ದರಾಮಯ್ಯ ಅವರು ಇನ್ನು ಮುಂದೆ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿ ಹೊರಹೊಮ್ಮಲಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಪ್ರಬಲ ನಾಯಕರಾಗಿದ್ದು, 5 ವರ್ಷಗಳ ಕಾಲ ಯಶಸ್ವಿಯಾಗಿ ಸರ್ಕಾರ ಮುನ್ನಡೆಸಿದ ಖ್ಯಾತಿ ಇದೆ. ಜೊತೆಗೆ ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭ ಅನ್ನಭಾಗ್ಯ ಸೇರಿದಂತೆ ಕೆಲ ಯೋಜನೆಗಳು ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟಿವೆ. ಜೊತೆಗೆ ವಿಧಾನಸಭೆ ಚುನಾವಣೆ ಸಂದರ್ಭ ಪ್ರಧಾನಿ ನರೇಂದ್ರಮೋದಿ, ಅಮಿತ್ ಷಾ ವಿರುದ್ಧ ನೇರಾನೇರ ಟೀಕೆ ಮಾಡುತ್ತಿದ್ದ ಸಿದ್ದರಾಮಯ್ಯ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದರು. ಹೀಗಾಗಿ, ರಾಷ್ಟ್ರೀಯ ಮಟ್ಟದಲ್ಲಿ ಸಿದ್ದರಾಮಯ್ಯ ವರ್ಚಸ್ಸು ವರ್ಕೌಟ್ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹೈಕಮಾಂಡ್ ಈ ಮುಂಬಡ್ತಿ ನೀಡಿದೆ.

Facebook Comments

Sri Raghav

Admin