ರಣರಂಗವಾಗಲಿದೆ ಸಂಸತ್ತಿನ ಮುಂಗಾರು ಅಧಿವೇಶನ

ಈ ಸುದ್ದಿಯನ್ನು ಶೇರ್ ಮಾಡಿ

Parliament

ನವದೆಹಲಿ, ಜು.17- ನಾಳೆಯಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು , ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ವೇದಿಕೆಯಾಗಿ ಪರಿಣಮಿಸಲಿದೆ. ನಾಳೆ ಶಿಷ್ಟಾಚಾರದಂತೆ ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ನಿರ್ಣಯ ಮಂಡಿಸಿ ಬಳಿಕ ಸದನವನ್ನು ಗುರುವಾರಕ್ಕೆ ಮುಂದೂಡಲಾಗುವುದು.

ಗುರುವಾರದಿಂದ ಅಧಿಕೃತ ಕಲಾಪ ಆರಂಭವಾಗಲಿದ್ದು , ಈ ಬಾರಿ ಸಂಸತ್ತಿನಲ್ಲಿ ಪ್ರಮುಖ 5 ಮಸೂದೆಗಳು ಮಂಡನೆಯಾಗಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ತ್ರಿವಳಿ ತಲಾಕ್, ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನ ಸ್ಥಾನಮಾನ ನೀಡುವುದು ಒಟ್ಟು 5 ಮಸೂದೆಗಳಿಗೆ ಅಂಗೀಕಾರ ಪಡೆಯಬೇಕಾಗಿದೆ. ತ್ರಿವಳಿ ತಲಾಕ್ ಲೋಕಸಭೆಯಲ್ಲಿ ಮಂಡನೆಯಾಗಿದ್ದರೂ ರಾಜ್ಯಸಭೆಯಲ್ಲಿ ಆಡಳಿತರೂಢ ಎನ್‍ಡಿಎ ಬಹುಮತ ಇಲ್ಲದ ಕಾರಣ ತಡೆ ಹಿಡಿಯಲಾಗಿದೆ. ಇದೇ ರೀತಿ ಪ್ರಮುಖ 4 ಮಸೂದೆಗಳು ಅಂಗೀಕಾರವಾಗಬೇಕಾಗಿರುವುದರಿಂದ ಮಿತ್ರ ಪಕ್ಷಗಳ ಬೆಂಬಲ ಪಡೆಯುವುದು ಅನಿವಾರ್ಯವಾಗಿದೆ.

ವಾಕ್ಸಮರಕ್ಕೆ ವೇದಿಕೆ:

ನಾಳೆಯಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದಲ್ಲಿ ಆಡಳಿತರೂಢ ಎನ್‍ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ ನಡುವೆ ಭಾರೀ ವಾಗ್ಯುದ್ಧ ನಡೆಯುವ ಸಂಭವವಿದೆ. ದೇಶದಲ್ಲಿ ಹಲವು ಕಡೆ ನಡೆದಿರುವ ದಲಿತರ ಮೇಲಿನ ಹಲ್ಲೆ ಗೋ ಸಂರಕ್ಷಣೆ ಹೆಸರಿನಲ್ಲಿ ಕೆಲವು ಸಂಘಟನೆಗಳು ನಡೆಸುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳು ಸೇರಿದಂತೆ ಪ್ರಚಲಿತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ಸಜ್ಜಾಗಿದೆ. ಇನ್ನು ಪ್ರತಿಪಕ್ಷಕ್ಕೆ ಕಾರ್ಯತಂತ್ರ ಹೆಣೆದಿರುವ ಆಡಳಿತರೂಢ ಪಕ್ಷವು ಸದನದಲ್ಲೇ ತಕ್ಕ ಉತ್ತರ ನೀಡಲು ಮುಂದಾಗಿದೆ.

ಸರ್ವ ಪಕ್ಷ ಸಭೆ:
ಮುಂಗಾರು ಅಧಿವೇಶನ ಸುಸೂತ್ರವಾಗಿ ನಡೆಯಲು ಎಲ್ಲಾ ರಾಜಕೀಯ ಪಕ್ಷಗಳು ಬೆಂಬಲ ನೀಡಬೇಕೆಂದು ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಮನವಿ ಮಾಡಿಕೊಂಡಿದ್ದಾರೆ. ಇಂದು ಸರ್ವ ಪಕ್ಷಗಳ ಸಭೆ ಕರೆದಿರುವ ಅವರು ಮುಂಗಾರು ಅಧಿವೇಶನದಲ್ಲಿ ಪ್ರಮುಖ ಮಸೂದೆಗಳ ಅಂಗೀಕಾರ ಹಾಗೂ ಪ್ರಶ್ನೋತ್ತರ ಕಲಾಪ ಸುಗಮವಾಗಿ ನಡೆಯಲು ಅನುವು ಮಾಡಿಕೊಡಬೇಕೆಂದು ಪ್ರಮುಖ ರಾಜಕೀಯ ಪಕ್ಷಗಳಿಗೆ ಮನವಿ ಮಾಡಲಿದ್ದಾರೆ.

ರಾಜ್ಯಸಭೆ ಉಪ ಸಭಾಪತಿ ಆಯ್ಕೆ:

ಈ ಬಾರಿಯ ಅಧಿವೇಶನದಲ್ಲಿ ಪ್ರಮುಖವಾಗಿ ರಾಜ್ಯಸಭೆಯ ಉಪ ಸಭಾಪತಿ ಚುನಾವಣೆ ನಡೆಯಲಿದೆ. ಹಾಲಿ ಉಪಸಭಾಪತಿಯಾಗಿದ್ದ ಜೆ.ಕುರಿಯನ್ ಅವರ ಅಧಿಕಾರಾವಧಿ ಮುಗಿದಿರುವ ಹಿನ್ನೆಲೆಯಲ್ಲಿ ತೆರವಾಗಿರುವ ಈ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬುದು ಈವರೆಗೂ ಖಚಿತಪಟ್ಟಿಲ್ಲ.  ಆಡಳಿತರೂಢ ಎನ್‍ಡಿಎ ಸರ್ಕಾರ ರಾಜ್ಯಸಭೆಯಲ್ಲಿ ಸ್ಪಷ್ಟ ಬಹುಮತ ಇಲ್ಲದ ಕಾರಣ ಇಕ್ಕಟ್ಟಿಗೆ ಸಿಲುಕಿದೆ. ಇನ್ನು ನರೇಂದ್ರ ಮೋದಿಗೆ ಮುಖಭಂಗ ಮಾಡಲೇಬೇಕೆಂದು ಪಣ ತೊಟ್ಟಿರುವ ವಿರೋಧ ಪಕ್ಷ ಕಾಂಗ್ರೆಸ್ ಮಿತ್ರ ಪಕ್ಷಗಳಿಗೆ ಈ ಸ್ಥಾನವನ್ನು ಬಿಟ್ಟುಕೊಡುವ ಸಂಭವವಿದೆ.

ಇದಲ್ಲದೆ ಈವರೆಗೂ ರಾಜ್ಯಸಭೆಯ ನಾಯಕರಾಗಿದ್ದ ಅರುಣ್ ಜೇಟ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಈ ಅಧಿವೇಶನ ಮುಗಿಯುವವರೆಗೂ ಸದನಕ್ಕೆ ಗೈರು ಹಾಜರಾಗಲಿದ್ದಾರೆ. ಹೀಗಾಗಿ ರಾಜ್ಯಸಭೆಯ ಸಭಾ ನಾಯಕರನ್ನಾಗಿ ಸರ್ಕಾರ ಯಾರನ್ನು ಆಯ್ಕೆ ಮಾಡಲಿದೆ ಎಂಬ ಯಕ್ಷಪ್ರಶ್ನೆ ಎದುರಾಗಲಿದೆ. ಒಟ್ಟಿನಲ್ಲಿ ಈ ಬಾರಿಯ ಮುಂಗಾರು ಅಧಿವೇಶನ ಹಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿದೆ.

Facebook Comments

Sri Raghav

Admin