ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರುತ್ತಿದ್ದ ನೈಜೀರಿಯಾ ಪ್ರಜೆ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

naijirian
ಬೆಂಗಳೂರು, ಜು.18- ಉದ್ಯೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಕೊಕೈನ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿ 3 ಲಕ್ಷ ರೂ. ಬೆಲೆಯ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಜಾನ್ ನಾನ್ಸೋ ಎಗ್ವೋ (32) ಬಂಧಿತ ನೈಜೀರಿಯಾ ಪ್ರಜೆ ಯಾಗಿದ್ದು, ಈತನಿಂದ 40 ಗ್ರಾಂ ತೂಕದ ಕೊಕೈನ್, ಕೃತ್ಯಕ್ಕೆ ಬಳಸಿದ್ದ 2 ಮೊಬೈಲ್, 1 ಬೈಕ್, 23 ಸಾವಿರ ಹಣ ವಶಪಡಿಸಿಕೊಳ್ಳಲಾಗಿದೆ. ಕೆಆರ್ ಪುರಂ ವ್ಯಾಪ್ತಿಯ ಟಿಸಿ ಪಾಳ್ಯ ಮುಖ್ಯರಸ್ತೆ, ಆನೆಯಪ್ಪ ಸರ್ಕಲ್ ಬಳಿ ಮಾದಕ ವಸ್ತು ಕೊಕೈನ್‍ಅನ್ನು ತನ್ನ ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿ ಆತನನ್ನು ಬಂಧಿಸಿದ್ದಾರೆ.

ಈತ ಭಾರತ ದೇಶದಲ್ಲಿ ವಾಸವಿದ್ದು, ವೀಸಾ ನಿಯಮಗಳನ್ನು ಉಲ್ಲಂಘಿಸಿ ಮಾದಕ ವಸ್ತುವಾದ ಕೊಕೈನ್‍ಅನ್ನು ತನ್ನ ವಶದಲ್ಲಿಟ್ಟುಕೊಂಡು ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ, ಇತರೆ ಯುವಕ-ಯುವತಿಯರಿಗೆ ಮಾರಾಟ ಮಾಡಿ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿ ಅಕ್ರಮ ಲಾಭ ಗಳಿಸುತ್ತಿದ್ದುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಈ ಸಂಬಂಧ ಕೆಆರ್ ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಬಿಯ ಎಸಿಪಿ ಡಾ.ವೆಂಕಟೇಶ ಪ್ರಸನ್ನ ಅವರ ಮಾರ್ಗದರ್ಶದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು.

Facebook Comments