ದುಬಾರಿ ಬೆಲೆಯ ಐ-ಫೋನ್ ತಿರಸ್ಕರಿಸಲು ಸಂಸದರ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

I-Phones--01

ಬೆಂಗಳೂರು,ಜು.18- ರಾಜ್ಯದ ಸಂಸದರಿಗೆ ಉಡುಗೊರೆಯಾಗಿ ನೀಡಿರುವ ದುಬಾರಿ ಬೆಲೆಯ ಐ-ಫೋನ್ ತಿರಸ್ಕರಿಸಲು ಬಿಜೆಪಿ ಸಂಸದರು ನಿರ್ಧರಿಸಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ತಿಳಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಾಜ್ಯ ಪ್ರತಿನಿಧಿಸುವ ಸಂಸದರಿಗೆ ಐ-ಫೋನ್ ನೀಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಗೆ ನೀಡಿದ್ದ ಫೋನ್‍ನನ್ನು ಸಿಬ್ಬಂದಿಗೆ ಹಿಂದಿರುಗಿಸಲು ಸೂಚಿಸಲಾಗಿದೆ. ರಾಜ್ಯದ ಎಲ್ಲ ಬಿಜೆಪಿ ಸಂಸದರು ಐ-ಫೋನ್ ಕೊಡುಗೆಯನ್ನು ತಿರಸ್ಕರಿಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

ರಾಜ್ಯದಲ್ಲಿ ವೇತನ ಸಿಗದೆ ಪೌರ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುವುದು ಒಂದೆಡೆಯಾದರೆ, ಮತ್ತೊಂದೆಡೆ ರೈತರು ದಿನನಿತ್ಯ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿ ಜನರ ಜೀವನವನ್ನು ದುಸ್ಥಿತಿಗೆ ತಳ್ಳಿದೆ. ಇಂಥ ಸಂದರ್ಭದಲ್ಲಿ ದುಬಾರಿ ಮೊತ್ತದ ಐ-ಫೋನ್ ಖರೀದಿಗೆ ಮಾಡಿರುವ ಹಣವನ್ನು ರಾಜ್ಯದ ಜನರ ನೋವು ಹಾಗೂ ಸಂಕಷ್ಟ ಪರಿಹಾರಕ್ಕೆ ಬಳಸಬಹುದಿತ್ತು ಎಂದು ಹೇಳಿದ್ದಾರೆ.
ಕೇಂದ್ರ ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ ಅವರು ಕೂಡ ಈಗಾಗಲೇ ತಮಗೆ ನೀಡಿರುವ ಐ-ಫೋನ್ ವಾಪಸ್ ಮಾಡುವಂತೆ ತಮ್ಮ ಸಿಬ್ಬಂದಿಗೆ ಸೂಚಿಸಿರುವುದಾಗಿ ಹೇಳಿದ್ದಾರೆ.

ಸಂಸದ ರಾಜೀವ್ ಚಂದ್ರಶೇಖರ್ ಸೇರಿದಂತೆ ಬಿಜೆಪಿಯ ಹಲವು ಸಂಸದರು ಐ-ಫೋನ್ ವಾಪಸ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಇಂದು ಸಂಜೆ ನಡೆಯುವ ರಾಜ್ಯ ಸಂಸದರ ಸಭೆಯ ಹಿನ್ನೆಲೆಯಲ್ಲಿ ಐಫೋನ್ ನೀಡಲಾಗಿತ್ತು.  ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಂಸದರಿಗೆ ಐ-ಫೋನ್ ನೀಡಿರುವ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದು, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ತಮ್ಮ ಸ್ವಂತ ಹಣದಲ್ಲಿ ಐ-ಫೋನ್ ನೀಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

Facebook Comments

Sri Raghav

Admin