ಇಂದು ಸಂಜೆ ದೆಹಲಿಯಲ್ಲಿ ಕರ್ನಾಟಕದ ಸಂಸದರ ಜೊತೆ ಸಿಎಂ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

CM-Kumaraswamy--NDTV

ನವದೆಹಲಿ, ಜು.18- ಸಂಸತ್ ಅಧಿವೇಶನ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಇಂದು ರಾತ್ರಿ ಕರ್ನಾಟಕ ಪ್ರತಿನಿಧಿಸುವ ಸಂಸದರ ಸಭೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆದಿದ್ದಾರೆ. ಕರ್ನಾಟಕ ಭವನದಲ್ಲಿ ರಾಜ್ಯಸಭೆ ಹಾಗೂ ಲೋಕಸಭಾ ಸದಸ್ಯರ ಸಭೆಯನ್ನು ಕರೆದಿದ್ದು, ಕಾವೇರಿ ನದಿನೀರು ನಿರ್ವಹಣಾ ಪ್ರಾಧಿಕಾರ ರಚನೆಗೆ ಸಂಬಂಧಿಸಿದಂತೆ ಮಹತ್ವದ ಚರ್ಚೆ ನಡೆಸಲಾಗುತ್ತದೆ. ಪ್ರಾಧಿಕಾರ ರಚನೆ ಹಾಗೂ ಕಾವೇರಿ ನದಿ ನೀರು ನಿರ್ವಹಣಾ ಸಮಿತಿಯಿಂದ ರಾಜ್ಯಕ್ಕೆ ಆಗುವ ಅನಾನುಕೂಲಗಳ ಬಗ್ಗೆ ಸಭೆಯಲ್ಲಿ ಸಂಸದರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಸಂಸತ್ ಅಧಿವೇಶನದಲ್ಲಿ ಈ ವಿಚಾರವನ್ನು ಆದ್ಯತೆ ಮೇಲೆ ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ಗಮನ ಸೆಳೆಯುವಂತೆಯೂ ಮುಖ್ಯಮಂತ್ರಿಗಳು ಮನವಿ ಮಾಡಿಕೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮಂಜೂರಾಗಬೇಕಿರುವ ವಿವಿಧ ಇಲಾಖೆಗಳ ಯೋಜನೆಗಳು, ಬಿಡುಗಡೆಯಾಗಬೇಕಿರುವ ಅನುದಾನದ ಬಗ್ಗೆಯೂ ಕೂಡ ಸಂಸದರಿಗೆ ಮಾಹಿತಿ ನೀಡಲಾಗುತ್ತದೆ. ರಾಜ್ಯ ರೈಲ್ವೆ ಯೋಜನೆಗಳು, ಬೆಂಬಲ ಬೆಲೆ ಯೋಜನೆಯಡಿ ಬಿಡುಗಡೆಯಾಗಬೇಕಿರುವ ಅನುದಾನ, ಮೂಲ ಸೌಕರ್ಯಗಳ ಅಭಿವೃದ್ಧಿಗೆ ಕೇಂದ್ರದ ನೆರವು, ಅತಿವೃಷ್ಟಿ ಹಾನಿಗೆ ಪರಿಹಾರ ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಸಂಸದರಿಗೆ ಪೂರಕ ಮಾಹಿತಿಯನ್ನು ಮುಖ್ಯಮಂತ್ರಿಗಳು ಒದಗಿಸಲಿದ್ದಾರೆ.

ರಾಜ್ಯದ ಪ್ರಮುಖ ವಿಚಾರಗಳನ್ನು ಸಂಸತ್ತಿನ ಉಭಯ ಸದನಗಳಲ್ಲಿ ಪ್ರಸ್ತಾಪಿಸಿ ಕೇಂದ್ರದಿಂದ ಹೆಚ್ಚಿನ ಅನುದಾನ ಒದಗಿಸುವಂತೆ ಸಂಸದರಲ್ಲಿ ಮನವಿ ಮಾಡಲಾಗುತ್ತದೆ. ಪ್ರತಿ ಅಧಿವೇಶನಕ್ಕೂ ಮುನ್ನ ಮುಖ್ಯಮಂತ್ರಿಗಳು, ಸಂಸದರ ಸಭೆ ಕರೆಯುವುದು ಸಂಪ್ರದಾಯ. ಅದರಂತೆ ಇಂದು ಮುಖ್ಯಮಂತ್ರಿಗಳು ಸಭೆಯನ್ನು ಕರೆದಿದ್ದಾರೆ.

ಸಭೆಗೂ ಮುನ್ನ ಕೇಂದ್ರ ಸಚಿವರಾದ ಪಿಯುಷ್ ಗೋಯಲ್, ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ರಾಜ್ಯಕ್ಕೆ ಸಂಬಂಧಿಸಿದ ಯೋಜನೆ ಹಾಗೂ ಪ್ರಮುಖ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Facebook Comments

Sri Raghav

Admin