ಹೆಚ್ಚುವರಿ ಪೌರ ಕಾರ್ಮಿಕರನ್ನು ತೆಗೆದು ಹಾಕದಂತೆ ಮೇಯರ್ ಸಂಪತ್ರಾಜ್ಗೆ ಒತ್ತಾಯ
ಬೆಂಗಳೂರು, ಜು.18-ಹೆಚ್ಚುವರಿ ಪೌರ ಕಾರ್ಮಿಕರನ್ನು ಯಾವುದೇ ಕಾರಣಕ್ಕೂ ತೆಗೆದುಹಾಕಬಾರದು ಎಂದು ಯಲಹಂಕ ವಲಯದ ಪೌರಕಾರ್ಮಿಕರು ಮೇಯರ್ ಸಂಪತ್ರಾಜ್ ಅವರನ್ನು ಒತ್ತಾಯಿಸಿದರು. ಯಲಹಂಕ ಬಿಬಿಎಂಪಿ ವಲಯ ಕಚೇರಿ ಯಲ್ಲಿಂದು ಅಧಿಕಾರಿಗಳೊಂದಿಗೆ ಮೇಯರ್ ಸಭೆ ನಡೆಸಿದ ವೇಳೆ ಪೌರಕಾರ್ಮಿಕರು ಅವರನ್ನು ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡರು.
4, 6 ಮತ್ತು 7ನೇ ವಾರ್ಡ್ನ 30 ಜನ ಪೌರಕಾರ್ಮಿಕರಿಗೆ ಆರು ತಿಂಗಳಿನಿಂದ ವೇತನ ನೀಡಿಲ್ಲ. ಮಹಿಳಾ ಪೌರಕಾರ್ಮಿಕರಿಗೆ ಹೆರಿಗೆ ರಜೆಯನ್ನೂ ಕೊಡದೆ, ವೇತನವನ್ನು ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಜೊತೆಗೆ ಹೆರಿಗೆಗೆ ಹೋದವರನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದು ಪೌರಕಾರ್ಮಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಹೆಚ್ಚುವರಿ ಪೌರಕಾರ್ಮಿಕರನ್ನು ಕೈಬಿಡಬಾರದು. 30 ಜನ ಪೌರಕಾರ್ಮಿಕರಿಗೆ ತಕ್ಷಣವೇ ವೇತನ ಕೊಡಬೇಕು. ಕೆಲಸದ ಸಮಯದಲ್ಲಿ ದಬ್ಬಾಳಿಕೆ ನಡೆಸುವ ಮೇಸ್ತ್ರಿಗಳಿಗೆ ಕಡಿವಾಣ ಹಾಕಬೇಕು ಎಂದು ಪೌರಕಾರ್ಮಿಕ ಸಂಘದ ರಾಜ್ಯ ಸಂಚಾಲಕ ಚಂದ್ರಣ್ಣ ಆಗ್ರಹಿಸಿದರು.ಒಂದು ವೇಳೆ ನಮ್ಮ ಈ ಬೇಡಿಕೆಗಳನ್ನು ಈಡೇರಿಸದೆ ಹೋದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಚಂದ್ರಣ್ಣ ಎಚ್ಚರಿಸಿದರು.
ಮಾಹಿತಿ ಪಡೆದ ಮೇಯರ್: ಯಲಹಂಕ ವಲಯದಲ್ಲಿ ಎಷ್ಟು ಮಂದಿ ಪೌರಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಹೆಚ್ಚುವರಿ ಪೌರಕಾರ್ಮಿಕರು ಎಷ್ಟು ಮಂದಿ ಇದ್ದಾರೆ ಎಂಬ ಬಗ್ಗೆ ಮೇಯರ್ ಸಂಪತ್ರಾಜ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ಹೆಚ್ಚುವರಿ ಪೌರಕಾರ್ಮಿಕರ ನೇಮಕಾತಿಗೆ ಅಧಿಕಾರಿಗಳೇ ಕಾರಣ ಎಂದು ಈ ವೇಳೆ ಸಂಪತ್ರಾಜ್ ಅಸಮಾಧಾನ ವ್ಯಕ್ತಪಡಿಸಿದರು. ಯಾವ ಆಧಾರದ ಮೇಲೆ ಹೆಚ್ಚುವರಿ ಪೌರಕಾರ್ಮಿಕರನ್ನು ನೇಮಿಸಿಕೊಂಡಿದ್ದೀರಿ. ನಮ್ಮ ಗಮನಕ್ಕೂ ತಂದಿಲ್ಲ, ಅಲ್ಲದೆ ಆರು ತಿಂಗಳಿನಿಂದ ಅವರಿಗೆ ವೇತನವನ್ನೂ ಕೊಟ್ಟಿಲ್ಲ ಎಂದು ಅಧಿಕಾರಿಗಳನ್ನು ಸಂಪತ್ರಾಜ್ ತರಾಟೆಗೆ ತೆಗೆದುಕೊಂಡರು.