ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

Judges--01

ನವದೆಹಲಿ,ಜು.18- ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಪ್ರಸ್ತುತ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು 65ನೇ ವರ್ಷಕ್ಕೆ ನಿವೃತ್ತಿಯಾಗಬೇಕು. ಇದೇ ರೀತಿ ಹೈಕೋರ್ಟ್ ನ್ಯಾಯಮೂರ್ತಿಗಳ ಸೇವಾವಧಿ 62 ವರ್ಷಕ್ಕೆ ಸೀಮಿತಗೊಳಿಸಲಾಗಿದೆ. ಇದೀಗ ಕೇಂದ್ರ ಸರ್ಕಾರ ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ಮಾಡಲು ಮುಂದಾಗಿದ್ದು , ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು 65ನೇ ವಯಸ್ಸಿನಿಂದ 67ನೇ ವಯಸ್ಸಿಗೆ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸನ್ನು 62ರಿಂದ 64ಕ್ಕೆ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ದೇಶದ ವಿವಿಧ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಕೊರತೆ ಹಾಗೂ ಪ್ರಕರಣಗಳು ಇತ್ಯರ್ಥಗೊಳಿಸುವುದು ಸವಾಲಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಮಾರ್ಗೋಪಾಯ ಕಂಡುಕೊಂಡಿದೆ.  ಇಂದಿನಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದಲ್ಲಿ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಕಾಯ್ದೆಗೆ ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ತಿದ್ದುಪಡಿ ಮಾಡಲು ಕಾನೂನು ಇಲಾಖೆ ಮುಂದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಂಸತ್ತಿನ ಸ್ಥಾಯಿ ಸಮಿತಿ ಕೂಡ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು ಹೆಚ್ಚಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿತ್ತು. ಇದಕ್ಕೆ ಕಾನೂನು ಇಲಾಖೆ ಸಮ್ಮತಿಸಿದೆ. ಯಾವ ಯಾವ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಹುದ್ದೆ ಖಾಲಿ ಇದೆಯೋ ಅಂಥ ಕಡೆ ಅರ್ಹತೆ ಮೇರೆಗೆ ಬಡ್ತಿ ಮಾಡುವುದು ಹಾಗೂ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಲು ಸೂಚಿಸಲಾಗಿದೆ. ಮೂಲಗಳ ಪ್ರಕರಾರ ಅಲಹಾಬಾದ್ ಹೈಕೋರ್ಟ್‍ನಲ್ಲಿ 56, ಕರ್ನಾಟಕ 38, ಕೋಲ್ಕತ್ತ 39, ಪಂಜಾಬ್ ಮತ್ತು ಹರಿಯಾಣ 35, ತೆಲಂಗಾಣ ಮತ್ತು ಆಂಧ್ರಪ್ರದೇಶ 30 ಹಾಗೂ ಮುಂಬೈನಲ್ಲಿ 24 ನ್ಯಾಯಾಧೀಶರ ಹುದ್ದೆಗಳು ಖಾಲಿ ಉಳಿದಿವೆ.

ಇದರಿಂದ ನಿಗದಿತ ಅವಧಿಯೊಳಗೆ ಪ್ರಕರಣಗಳನ್ನು ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಾಲಿ ಇರುವ ನ್ಯಾಯಾಧೀಶರನ್ನೇ ಮುಂದುವರೆಸಲು ಸೇವಾವಧಿ ವಿಸ್ತರಣೆಗೆ ಸರ್ಕಾರ ಮುಂದಾಗಿದೆ. ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಹೈಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 62 ವರ್ಷದಿಂದ 65 ವರ್ಷಕ್ಕೆ ಏರಿಕೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಲೋಕಸಭೆ ಚುನಾವಣೆ ಘೋಷಣೆಯಾದ ಪರಿಣಾಮ ಈ ಪ್ರಸ್ತಾವನೆ ನೆನೆಗುದಿಗೆ ಬಿದ್ದಿತ್ತು.

ಈಗ ಹಾಲಿ ಇರುವ 2010 ಸಂವಿಧಾನದ ಮಸೂದೆ(114ನೇ ತಿದ್ದುಪಡಿ)ಯನ್ನು ಸಂಸತ್ತಿನಲ್ಲಿ ಮಂಡಿಸಿ ನಿವೃತ್ತಿ ವಯಸ್ಸು ಹೆಚ್ಚಿಸಲು ಸರ್ಕಾರ ಮುಂದಾಗಿದ್ದು, ಇದೇ 25ರಂದು ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಲಿದೆ ಎಂದು ತಿಳಿದುಬಂದಿದೆ. ಕೇಂದ್ರ ಕಾನೂನು ಇಲಾಖೆ ನೀಡಿರುವ ಮಾಹಿತಿಯಂತೆ ದೇಶದಲ್ಲಿ ಒಟ್ಟು 24 ಹೈಕೋರ್ಟ್‍ಗಳಲ್ಲಿ 406 ಹುದ್ದೆಗಳು ಖಾಲಿ ಇವೆ. ದೇಶಾದ್ಯಂತ ಒಟ್ಟು ಮೂರು ಕೋಟಿ ಪ್ರಕರಣಗಳು ವಿಚಾರಣೆ ನಡೆಯದೆ ಧೂಳು ತಿನ್ನುತ್ತಿದೆ.

Facebook Comments

Sri Raghav

Admin