ಗುರು ಗ್ರಹದ ಸುತ್ತ 12 ಹೊಸ ಚಂದ್ರ ಗೃಹಗಳು ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Moons--01
ವಾಷಿಂಗ್ಟನ್, ಜು.18-ಸೌರಮಂಡಲ ಅನೇಕಾನೇಕ ವಿಸ್ಮಯಗಳ ಭಂಡಾರ. ಹೊಸ ಹೊಸ ಸಂಗತಿಗಳು ಪತ್ತೆಯಾಗುತ್ತಾ ಜ್ಯೋತಿರ್ವಿಜ್ಞಾನ ಆಸಕ್ತರನ್ನು ಬೆರಗುಗೊಳಿಸುತ್ತವೆ. ಈಗ ಖಗೋಳ ವಿಜ್ಞಾನಿಗಳು ಪತ್ತೆ ಮಾಡಿರುವ ವಿದ್ಯಮಾನವೊಂದು ತೀವ್ರ ಕುತೂಹಲ ಕೆರಳಿಸಿದೆ. ಸೌರಮಂಡಲದ ಅತ್ಯಂತ ದೊಡ್ಡ ಗ್ರಹವಾದ ಗುರು (ಜ್ಯೂಪಿಟರ್) ಸುತ್ತ 12 ಹೊಸ ಚಂದ್ರಗಳು ಪ್ರದಕ್ಷಿಣೆ ಹಾಕುತ್ತಿದ್ದು, ಅವರು ಒಂದಕ್ಕೊಂದು ಡಿಕ್ಕಿ ಹೊಡೆಯಲು ಕಕ್ಷೆಯಲ್ಲಿ ಸುತ್ತು ಹಾಕುತ್ತಿವೆ ಎಂಬ ಹೊಸ ಸಂಗತಿಯನ್ನು ಬಹಿರಂಗಗೊಳಿಸಿದ್ದಾರೆ.

ಈ 12 ಹೊಸ ಚಂದ್ರಗಳಲ್ಲಿ ಬೃಹಸ್ಪತಿ(ಗುರು) ಗ್ರಹಕ್ಕೆ ಸಂಬಂಧಪಟ್ಟ ಎರಡು ಚಂದ್ರಗಳು ಒಂದಕ್ಕೊಂದು ಮುಖಾಮುಖಿಯಾಗಿ ಅಪ್ಪಳಿಸುವ ಸಾಧ್ಯತೆ ಇದೆ. ಇವು ಡಿಕ್ಕಿ ಹೊಡೆದಾಗ ಉಂಟಾಗುವ ಸ್ಪೋಟವು ಭೂಮಿಯಿಂದ ನೇರವಾಗಿ ವೀಕ್ಷಿಸುವಷ್ಟು ತೀವ್ರತೆ ಹೊಂದಿರಲಿದೆ ಎಂದು ವಾಷಿಂಗ್ಟನ್‍ನ ಕಾರ್ನಿಗೀ ಇನ್ಸ್‍ಟಿಟ್ಯೂಷನ್ ಫಾರ್ ಸೈನ್ಸ್‍ನ ಹಿರಿಯ ಖಗೋಳ ವಿಜ್ಞಾನಿ ಸ್ಕಾಟ್ ಶೇಪರ್ಡ್ ವಿವರಿಸಿದ್ದಾರೆ.   ಚಂದಿರನ ಹೋಲುವ ಈ ಆಕಾಶಕಾಯಗಳು ಸೂಸೈಡ್ ಆರ್ಬಿಟ್ (ಆತ್ಮಹತ್ಯೆ ಕಕ್ಷಾ ಪಥ) ಮೇಲೆ ಚಲಿಸುತ್ತಿದ್ದು, ಒಂದು ಡಜನ್ ಮೂನ್‍ಗಳಲ್ಲಿ ಎರಡು ಪರಸ್ಪರ ಅಪ್ಪಳಿಸಿಕೊಂಡು ನಾಶ ಹೊಂದಲಿವೆ ಎಂದು ಅವರು ವಿವರಿಸಿದ್ದಾರೆ.

ಸೌರವ್ಯೂಹದ ಅತ್ಯಂತ ದೂರದಲ್ಲಿರುವ ನೆಪ್ಚೂನ್ ಗ್ರಹದ ಕಕ್ಷೆಯ ಹಿಂದೆ ಇರುವ ನಿಗೂಢ ಗ್ರಹವೊಂದಕ್ಕಾಗಿ ವಿಜ್ಞಾನಿಗಳು ಶೋಧ ನಡೆಸುತ್ತಿದ್ದಾಗ ಈ ವಿಸ್ಮಯ ಸಂಗತಿ ಪತ್ತೆಯಾಗಿದೆ.  ಕಳೆದ ವರ್ಷ ಮಾರ್ಚ್‍ನಲ್ಲಿ ಚಿಲಿ ದೇಶದಲ್ಲಿರುವ ಸೆರ್ರೋ ಟೊಲೊಲೊ ಇಂಟರ್ ಅಮೆರಿಕನ್ ಅರ್ಬರ್‍ವೇಟರ್(ಖಗೋಳ ವೀಕ್ಷಣಾಲಯ)ದ ಮೂಲಕ ಇಂಥ ಹೊಸ ಚಂದ್ರಗಳ ಬಗ್ಗೆ ಮಾಹಿತಿ ಲಭಿಸಿದ್ದು, ಹೆಚ್ಚಿನ ಸಂಶೋಧನೆಯಿಂದ ಅದು ದೃಢಪಟ್ಟಿದೆ. ಈ ಬಗ್ಗೆ ಮತ್ತಷ್ಟು ನಿಖರ ಅಧ್ಯಯನ ನಡೆಸಲು ಒಂದು ವರ್ಷಕ್ಕೂ ಹೆಚ್ಚು ಕಾಲ ಬೇಕಾಗುತ್ತದೆ ಎಂದು ಸ್ಕಾಟ್ ವಿವರಿಸಿದ್ದಾರೆ. ಈ 12 ಹೊಸ ಚಂದ್ರಗಳ ಪತ್ತೆಯೊಂದಿಗೆ ಸೌರಮಂಡಲದಲ್ಲಿ ಗುರು ಗ್ರಹದ ಬಳಿ ಒಟ್ಟು 79 ಆಕಾಶಕಾಯಗಳು ಕಂಡುಬಂದಂತಾಗಿದೆ.

Facebook Comments

Sri Raghav

Admin