ಬಿಜಿಎಸ್ ವೈದ್ಯರಿಂದ ಇಬ್ಬರು ರೋಗಿಗಳಿಗೆ ಯಶಸ್ವಿ ಶ್ವಾಸಕೋಶ ಕಸಿ

ಈ ಸುದ್ದಿಯನ್ನು ಶೇರ್ ಮಾಡಿ

BGS
ಬೆಂಗಳೂರು, ಜು.17- ಬಹು ಅಂಗಾಂಗ ಕಸಿಯಲ್ಲಿ ನಿಷ್ಣಾತವಾಗಿರುವ ಬಿಜಿಎಸ್ ಗ್ಲೆನ್ ಈಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್ ಸತತವಾಗಿ ಎರಡೆರಡು ಶ್ವಾಸಕೋಶಗಳನ್ನು ಕಸಿ ಮಾಡುವ ಮೂಲಕ ಇಬ್ಬರು ರೋಗಿಗಳಿಗೆ ಮರು ಜೀವ ನೀಡುವಲ್ಲಿ ಯಶಸ್ವಿಯಾಗಿದೆ.  ಈ ಶ್ವಾಸಕೋಶ ಕಸಿಗೆ ಒಳಗಾದ ವರಿಬ್ಬರೂ ಹಿರಿಯ ನಾಗರಿಕರಾಗಿದ್ದಾರೆ. ಮೊದಲ ರೋಗಿ ಕೇರಳ ಮೂಲದ 61 ವರ್ಷ ವಯಸಿನ ಸುರೇಶ್‍ಬಾಬು ಮತ್ತು ಮಧ್ಯಪ್ರದೇಶದ 62 ವರ್ಷ ವಯಸಿನ ಜಯಂತ್‍ಕುಮಾರ್ ಶಾ ಅವರಿಗೆ ಒಂದು ವಾರದಲ್ಲಿ ಶ್ವಾಸಕೋಶ ಕಸಿ ಮಾಡಲಾಗಿದೆ. ಬೆಂಗಳೂರಿನ ಗ್ಲೆನ್‍ಈಗಲ್ಸ್ ಹಾಸ್ಪಿಟಲ್ಸ್‍ನ ಕಾರ್ಡಿಯಾಕ್ ಸರ್ಜರೀಸ್ ಅಂಡ್ ಥೊರಾಸಿಸ್ ಆರ್ಗನ್ ಟ್ರಾನ್ಸ್‍ಪ್ಲಾಂಟ್ ವಿಭಾಗದ ಮುಖ್ಯಸ್ಥ ಡಾ.ಸಂದೀಪ್ ಅತ್ತಾವರ್ ಅವರ ನೇತೃತ್ವದ ತಜ್ಞ ವೈದ್ಯರ ತಂಡ ಈ ಎರಡು ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ. ಈ ಇಬ್ಬರು ರೋಗಿಗಳು ದೀರ್ಘಕಾಲದಿಂದ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದು, ಅವರ ಜೀವ ಉಳಿಸಲು ಅಗತ್ಯವಾಗಿ ಶ್ವಾಸಕೋಶದ ಕಸಿ ಮಾಡಬೇಕಿತ್ತು.

ಚೆನ್ನೈನಲ್ಲಿನ ಗ್ಲೆನ್‍ಈಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್‍ನಲ್ಲಿ ತಪಾಸಣೆಗೆ ಒಳಪಡಿಸಿದಾಗ ಸುರೇಶ್‍ಬಾಬು ಅವರ ಸ್ಥಿತಿ ಗಂಭೀರವಾಗಿತ್ತು. ಅವರಿಗೆ ಪ್ರತಿ ನಿಮಿಷಕ್ಕೆ 15 ಲೀಟರ್‍ನಷ್ಟರಂತೆ ದಿನದ 24 ಗಂಟೆಯೂ ಆಮ್ಲಜನಕದ ನೆರವಿನಿಂದ ಉಸಿರಾಡುತ್ತಿದ್ದರು. ಇದರ ಪರಿಣಾಮ ಅವರು ಹಾಸಿಗೆ ಹಿಡಿದಿ ದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಐಸಿಯುನಲ್ಲಿ ಕೃತಕ ಉಸಿರಾಟ ವ್ಯವಸ್ಥೆ ಯೊಂದಿಗೆ ದಾಖಲು ಮಾಡಲಾಗಿತ್ತು. ಇಂತಹ ಪರಿಸ್ಥಿತಿ ಇರುವಾಗಲೇ ಮೈಸೂರಿನ ವ್ಯಕ್ತಿಯೊಬ್ಬರಿಂದ ಅಂಗ ದಾನವಾಗುತ್ತಿರುವ ಬಗ್ಗೆ ಮಾಹಿತಿಯನ್ನು ಪಡೆಯಲಾಗಿತ್ತು. ಅದರಂತೆ ಮೈಸೂರಿನಿಂದ ಬೆಂಗಳೂರಿನವರೆಗೆ ಗ್ರೀನ್‍ಕಾರಿಡಾರ್ ವ್ಯವಸ್ಥೆಯೊಂದಿಗೆ 70 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಬಿಜಿಎಸ್ ಗ್ಲೆನ್‍ಈಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್‍ಗೆ ಶ್ವಾಸಕೋಶವನ್ನು ತರಲಾಯಿತು. ಇದೇ ವೇಳೆ ರೋಗಿ ಸುರೇಶ್‍ಬಾಬು ಅವರನ್ನು ಚೆನ್ನೈನಿಂದ ಬೆಂಗಳೂರಿಗೆ ಶಸ್ತ್ರಚಿಕಿತ್ಸೆಗೆಂದು ಕರೆತರಲಾಯಿತು. ಕಳೆದ ಜು.5 ರಂದು ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದ್ದು, ಕೇವಲ ಎರಡು ವಾರದೊಳಗೆ ರೋಗಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ. ಮತ್ತೊಂದೆಡೆ, ಜಯಂತ್ ಶಾ ಅವರು ಚೆನ್ನೈನ ಗ್ಲೆನ್‍ಈಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್‍ನಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇದೇ ಸಂದರ್ಭದಲ್ಲಿ ಮತ್ತೆ ಮೈಸೂರಿನಲ್ಲಿ ಮತ್ತೊಬ್ಬ ವ್ಯಕ್ತಿಯು ಅಂಗಾಂಗ ದಾನ ಮಾಡುತ್ತಿರುವ ಬಗ್ಗೆ ಬೆಂಗಳೂರಿನ ವೈದ್ಯರಿಗೆ ಮಾಹಿತಿ ಲಭ್ಯವಾಯಿತು. ಈ ಹಿನ್ನೆಲೆಯಲ್ಲಿ ಜಯಂತ್‍ಶಾ ಅವರನ್ನು ಚೆನ್ನೈನಿಂದ ಬೆಂಗಳೂರಿಗೆ ಜುಲೈ 7 ರಂದು ಕರೆ ತಂದು, ಹಾಸ್ಪಿಟಲ್ಸ್‍ನ ಮತ್ತೊಂದು ತಂಡ ಮೈಸೂರಿಗೆ ತೆರಳಿ ದಾನಿಯ ಶ್ವಾಸಕೋಶವನ್ನು ಗ್ರೀನ್‍ಕಾರಿಡಾರ್ ನೆರವಿನಿಂದ ಬೆಂಗಳೂರಿಗೆ ಕೇವಲ 90 ನಿಮಿಷದಲ್ಲಿ ತಂದು ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಲಾಗಿದೆ.

ಡಾ.ಸಂದೀಪ್ ಅತ್ತಾವರ್, ಡಾ. ಪ್ರಭಾತ್ ದತ್ತ, ಡಾ.ವಿಜಿಲ್ ರಾಹುಲನ್, ಡಾ.ಪ್ರದೀಪ್‍ಕುಮಾರ್, ಡಾ.ಗೋವಿನಿ ಬಿ, ಡಾ.ಭಾಸ್ಕರ್ ಬಿ.ವಿ., ಡಾ.ಸಂದೀಪ ಎಚ್.ಎಸ್, ಡಾ.ವಿಶ್ವನಾಥ್ ಬೆಲ್ಲದ್, ಡಾ. ಮಧುಸೂಧನ್, ಡಾ.ಶ್ರೀನಿವಾಸ್ ಎಚ್, ಡಾ.ಸರಣ್ಯ ಮತ್ತು ಡಾ.ನಾಗೇಶ್ ಸೇರಿದಂತೆ ಇನ್ನೂ ಹಲವು ತಜ್ಞ ವೈದ್ಯರು ಈ ಎರಡು ವಿನೂತನವಾದ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.

Facebook Comments