ಪತಿಯನ್ನು ಕೊಂದು ಆತ್ಮಹತ್ಯೆಯೆಂದು ಬಿಂಬಿಸಿದ್ದ ಪತ್ನಿ ಮತ್ತು ಮಗನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Murder-Wife-01

ಬೇಲೂರು, ಜು.18- ಸಾಲ ತೀರಿಸಲಾಗದೆ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಲಾಗಿದ್ದ ಪ್ರಕರಣವೀಗ ಪತ್ನಿ ಹಾಗೂ ಪುತ್ರ ಸೇರಿ ಹತ್ಯೆ ಮಾಡಿ ನಾಟಕವಾಡಿರುವುದನ್ನು ಬೇಲೂರು ಪೊಲೀಸರು ಬೇಧಿಸಿದ್ದಾರೆ. ಜೂನ್ 9ರಂದು ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಬ್ಬಿನಮನೆ ಮತ್ತಾವರ ಗ್ರಾಮದ ಗಾಯತ್ರಿ ಎಂಬುವವರು ಅರೇಹಳ್ಳಿ ಪೊಲೀಸ್ ಠಾಣೆಗೆ ತೆರಳಿ ತಮ್ಮ ಪತಿ ಯೋಗೇಶ್‍ಗೌಡರು ಕೊಳವೆ ಬಾವಿ ತೆಗೆಸುವುದಕ್ಕಾಗಿ ಸಾಲ ಮಾಡಿಕೊಂಡು ಸಾಲ ತೀರಿಸಲಾಗದೆ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರು ನೀಡಿದ್ದರು.

ಈ ದೂರಿನನ್ವಯ ಅರೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಸ್ಥಳ ಪರಿಶೀಲನೆ ನಡೆಸಿದ ಸಂದರ್ಭ ರಕ್ತದ ಕಲೆ ಕಂಡು ಬಂದಿತ್ತು. ನಂತರ ಮೃತ ದೇಹವನ್ನು ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ನೀಡಿ ಮರಣೋತ್ತರ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ಮೃತ ಯೋಗೇಶ್‍ಗೌಡ ಸಹೋದರ ಮಾತ್ರ ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಅನುಮಾನ ವ್ಯಕ್ತಪಡಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ಮನವಿ ಮಾಡಿದ್ದರು.  ತಿಂಗಳ ನಂತರ ಮರಣೋತ್ತರ ವರದಿ ಕೈ ಸೇರಿದಾಗ ವರದಿಯಲ್ಲಿ ಮೃತ ವ್ಯಕ್ತಿಯನ್ನು ಹೊಡೆದು ಉಸಿರುಗಟ್ಟಿಸಿ ಹತ್ಯೆ ಮಾಡಿರಬಹುದೆಂದು ಶಂಕಿಸಲಾಗಿತ್ತು.

ಈ ವರದಿ ಆಧಾರದ ಮೇಲೆ ಎಚ್ಚೆತ್ತ ವೃತ್ತ ನಿರೀಕ್ಷಕ ಲೋಕೇಶ್ ಪ್ರಕರಣದ ತನಿಖೆಗಿಳಿದು ಯೋಗೇಶ್‍ಗೌಡರ ಪುತ್ರ, ಆರೋಪಿ 19 ವರ್ಷದ ದರ್ಶನ್ ಎಂಬುವನನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಕೊಲೆ ರಹಸ್ಯ ಬಯಲಿಗೆ ಬಂದಿದೆ.ಯೋಗೇಶ್‍ಗೌಡ ಕೊಲೆಯಾದ ರಾತ್ರಿ ಪತ್ನಿ ಗಾಯತ್ರಿ, ಪುತ್ರರಾದ ದರ್ಶನ್ ಹಾಗೂ ಶಶಾಂಕ್ ಮಾತ್ರ ಮನೆಯಲ್ಲಿದ್ದರು. ಅಂದು ರಾತ್ರಿ ಮನೆಯಲ್ಲಿ ಪತಿ-ಪತ್ನಿ ನಡುವೆ ಗಲಾಟೆ ಘರ್ಷಣೆ ನಡೆದಿದೆ. ಆದರೆ, ರಾತ್ರಿ ಎಲ್ಲರೂ ಮಲಗಿದ ನಂತರ ಪುತ್ರ ದರ್ಶನ್ ಹಾಗೂ ಪತ್ನಿ ಗಾಯತ್ರಿ ಸೇರಿ ಯೋಗೇಶ್‍ಗೌಡನಿಗೆ ಹೊಡೆದು ಹಗ್ಗದಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ನೇಣು ಬಿಗಿದು ಆತ್ಮಹತ್ಯೆ ಎಂದು ನಾಟಕವಾಡಿ ನಂತರ ಮಲಗಿದ್ದ ಮತ್ತೊಬ್ಬ ಮಗನಿಗೆ ನಿಮ್ಮ ತಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯೋಗೇಶ್‍ಗೌಡನ ಪತ್ನಿ ಗಾಯತ್ರಿ ಹಾಗೂ ಪುತ್ರ ದರ್ಶನ್‍ನನ್ನು ಪೊಲೀಸರು ಬಂಧಿಸಿ ತೀವ್ರವಾಗಿ ವಿಚಾರಣೆಗೊಳಪಡಿಸಿದ್ದಾರೆ.ವೃತ್ತ ನಿರೀಕ್ಷಕ ಲೋಕೇಶ್ ನೇತೃತ್ವದಲ್ಲಿ ತನಿಖೆಗಿಳಿದ ಪಿಎಸ್‍ಐ ಸುಬ್ಬಯ್ಯ, ಸಿಬ್ಬಂದಿಗಳಾದ ಮಲ್ಲೇಶ್, ಎಎಸ್‍ಐ ಶಿವಶಂಕರ್, ತಾಂಡವೇಶ್ವರ, ಜಮೃದ್ದೀನ್, ವಾಣಿ ರಘುರವರ ಕಾರ್ಯಾಚರಣೆ ಶ್ಲಾಘನೀಯವಾಗಿದೆ.

Facebook Comments

Sri Raghav

Admin