ಭುಗಿಲೆದ್ದ ಐಫೋನ್ ವಿವಾದ, ಶಾಸಕರ ‘ಸೂಟ್‍ಕೇಸ್’ ಭಾಗ್ಯಕ್ಕೂ ಕುತ್ತು…!

ಈ ಸುದ್ದಿಯನ್ನು ಶೇರ್ ಮಾಡಿ

Briefcase

ಬೆಂಗಳೂರು,ಜು.19- ಸಂಸದರಿಗೆ ನೀಡಲು ಮುಂದಾಗಿದ್ದ ಐಫೋನ್ ವಿವಾದ ಭುಗಿಲೆದ್ದಿರುವ ಬೆನ್ನಲ್ಲೇ ಈ ಬಾರಿ ಶಾಸಕರಿಗೆ ಸೂಟ್‍ಕೇಸ್ ನೀಡದಿರಲು ಸಚಿವಾಲಯ ತೀರ್ಮಾನಿಸಿದೆ. ಶಿಷ್ಟಾಚಾರದಂತೆ ವಿಧಾನಸಭೆಗೆ ಹೊಸದಾಗಿ ಆಯ್ಕೆಯಾದ ಶಾಸಕರು ಹಾಗೂ ವಿಧಾನಪರಿಷತ್‍ನ ಸದಸ್ಯರಿಗೆ ಸೂಟ್‍ಕೇಸ್ ನೀಡುವ ವ್ಯವಸ್ಥೆ ಕಳೆದ ಹಲವು ವರ್ಷಗಳಿಂದ ನಡೆದುಕೊಂಡು ಬಂದಿತ್ತು. ಒಂದು ದುಬಾರಿ ಬೆಲೆಯ ಸೂಟ್‍ಕೇಟ್ ಜೊತೆಗೆ ಅದರಲ್ಲಿ ವಿಧಾನಸಭೆಯ ಕಲಾಪಗಳ ನಡವಳಿಕೆ ಕುರಿತಂತೆ ಕಿರುಹೊತ್ತಿಗೆಯನ್ನು ಶಾಸಕರಿಗೆ ವಿಧಾನಸಭೆಯ ಸ್ಪೀಕರ್ ಹಾಗೂ ಪರಿಷತ್ ಸದಸ್ಯರಿಗೆ ಸಭಾಪತಿಗಳು ನೀಡುತ್ತಿದ್ದರು.

ಇದೇ ಮೊದಲ ಬಾರಿಗೆ ಉಭಯ ಸದನಗಳ ಯಾವುದೇ ಸದಸ್ಯರಿಗೆ ಸೂಟ್‍ಕೇಟ್ ನೀಡದಿರಲು ವಿಧಾನಸಭೆಯ ಸಚಿವಾಲಯ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯದ ಉಭಯ ಮಂಡಲದ ಹೊಸ ಸದಸ್ಯರಿಗೆ ಸೂಟ್‍ಕೇಟ್ ನೀಡುವ ಸಂಪ್ರದಾಯವನ್ನು ಹುಟ್ಟು ಹಾಕಿದ್ದರು. ಬಿಜೆಪಿಯಿಂದ ಆರಂಭವಾದ ಈ ಸಂಪ್ರದಾಯವನ್ನು ಬಳಿಕ ಬಂದ ಸಿದ್ದರಾಮಯ್ಯ ಕೂಡ ಮುಂದುವರೆಸಿದ್ದರು. ಸುಮಾರು ಐದು ಸಾವಿರ ಬೆಲೆ ಬಾಳುವ ಸೂಟ್‍ಕೇಸ್‍ಗಳನ್ನು ಸಚಿವಾಲಯದಿಂದ ನೀಡಲಾಗುತ್ತದೆ. ಈ ಬಾರಿಯೂ ಹೊಸದಾಗಿ ವಿಧಾನಸಭೆಗೆ ಆಯ್ಕೆಯಾದ 224 ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರಿಗೆ ಸೂಟ್‍ಕೇಸ್ ನೀಡಲು ವಿಧಾನಸಭೆಯ ಕಾರ್ಯದರ್ಶಿ ಮೂರ್ತಿ ತರಾತುರಿಯಲ್ಲಿ ಟೆಂಡರ್ ಕರೆಯಲು ಮುಂದಾಗಿದ್ದರು ಎನ್ನಲಾಗಿದೆ.

ಸಾಮಾನ್ಯವಾಗಿ ಸದಸ್ಯರಿಗೆ ಸೂಟ್‍ಕೇಸ್ ಖರೀದಿಸಬೇಕಾದರೆ ವಿಧಾನಸಭೆಯ ಸ್ಪೀಕರ್ ಅನುಮತಿಯನ್ನು ಕಡ್ಡಾಯವಾಗಿ ಪಡೆಯಲೇಬೇಕು. ಆದರೆ ಮೂರ್ತಿ ಅವರು ಸ್ಪೀಕರ್ ರಮೇಶ್‍ಕುಮಾರ್ ಅವರ ಅನುಮತಿ ಪಡೆಯದೇ ತರಾತುರಿಯಲ್ಲಿ ಟೆಂಡರ್ ಕರೆಯಲು ಮುಂದಾಗಿದ್ದು ವಿವಾದಕ್ಕೆ ಕಾರಣವಾಗಿದೆ.

ಸೂಟ್‍ಕೇಸ್ ಬೇಡವೇ ಬೇಡ:
ಐದು ಸಾವಿರ ರೂ. ಬೆಲೆಯ ಸೂಟ್‍ಕೇಸ್ ಖರೀದಿ ಮಾಡುವ ಟೆಂಡರ್ ಪ್ರಕ್ರಿಯೆಯನ್ನು ತಡೆಹಿಡಿಯಬೇಕೆಂದು ವಿಧಾನಸಭೆಯ ಕಾರ್ಯದರ್ಶಿ ಮೂರ್ತಿ ಅವರಿಗೆ ಸ್ಪೀಕರ್ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮೂರ್ತಿ ಸಮಜಾಯಿಷಿ ನೀಡಲು ಮುಂದಾದರೂ ಇದನ್ನು ಒಪ್ಪದ ರಮೇಶ್‍ಕುಮಾರ್ ನನ್ನ ಅನುಮತಿ ಇಲ್ಲದೆ ಖರೀದಿ ಮಾಡುವಂತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಪ್ರಕ್ರಿಯೆಯನ್ನು ತಡೆಹಿಡಿಯುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೂಟ್‍ಕೇಸ್ ಖರೀದಿಗೆ ಸುಮಾರು ಸುಮಾರು ಎರಡೂವರೆಯಿಂದ ಮೂರುವರೆ ಕೋಟಿ ವೆಚ್ಚ ತಗಲುತ್ತದೆ. ಅಲ್ಲದೆ ಇದನ್ನು ಒಂದು ಬಾರಿ ಶಾಸಕರು ಪಡೆದುಕೊಂಡರೆ ಅದನ್ನು ಸದನಕ್ಕಾಗಲಿ ಅಥವಾ ಬೇರೆ ಸಂದರ್ಭಗಳಲ್ಲಿ ತಂದಿರುವ ಉದಾಹರಣೆಗಳಿಲ್ಲ. ಸುಮ್ಮನೆ ಪಡೆದುಕೊಂಡು ತಮ್ಮ ಮನೆಗೆ ಕೊಂಡೊಯ್ದರೆ ಬಳಿಕ ಅದನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ಹೀಗಾಗಿ ಸರ್ಕಾರ ಸೂಟ್‍ಕೇಸ್‍ನ್ನು ಕೊಡಲೇ ಬಾರದು ಎಂಬ ತೀರ್ಮಾನಕ್ಕೆ ಬಂದಿದೆ ಎಂದು ಹೇಳಲಾಗಿದೆ.

Facebook Comments

Sri Raghav

Admin