ಮತ್ತೆ ಶುರುವಾಯ್ತು ರೆಡ್ಡಿ-ರಾಮುಲು ಗೇಮ್, ಸದ್ದಿಲ್ಲದೇ ಆಪರೇಷನ್ ಕಮಲ..!

ಈ ಸುದ್ದಿಯನ್ನು ಶೇರ್ ಮಾಡಿ

Sriramulu-Janardhan-Reddy

ಬೆಂಗಳೂರು,ಜು.19-ರಾಜ್ಯ ಕಾಂಗ್ರೆಸ್‍ನಲ್ಲಿ ಬಂಡಾಯ ಕಾಣಿಸಿಕೊಂಡಿದ್ದು ಇದರ ಬೆನ್ನಲ್ಲೇ ಬಿಜೆಪಿ ಆಪರೇಷನ್ ಕಮಲ ಕಾರ್ಯಾಚರಣೆಗೆ ಮುಂದಾಗಿದೆ. ಮಂತ್ರಿಮಂಡಲ ಪುನರ್‍ರಚನೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ಸನ್ನದ್ಧವಾಗುತ್ತಿದ್ದಂತೆಯೇ ಮಂತ್ರಿಗಿರಿ ಕಳೆದುಕೊಳ್ಳುವ ಆತಂಕದಲ್ಲಿರುವ ರಮೇಶ್ ಜಾರಕಿಹೊಳಿ ತಮ್ಮ ಹತ್ತಕ್ಕೂ ಹೆಚ್ಚು ಬೆಂಬಲಿಗ ಶಾಸಕರೊಂದಿಗೆ ಅಜ್ಮೀರ್‍ಗೆ ತೆರಳಿದ್ದಾರೆ.

ಮಂತ್ರಿ ಮಂಡಲದಲ್ಲಿ ಸತೀಶ್ ಜಾರಕಿಹೊಳಿ ಅವರಿಗೆ ಅವಕಾಶ ಮಾಡಿಕೊಡಬೇಕು ಎಂದು ಶಾಸಕಾಂಗ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪಟ್ಟು ಹಿಡಿದಿದ್ದು ಇದರ ಫಲವಾಗಿ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈ ಬಿಡುವ ಲಕ್ಷಣಗಳು ಕಂಡು ಬಂದಿವೆ. ಯಾವಾಗ ಇದರ ಸುಳಿವು ಕಂಡಿತೋ ಆಗ ಇದ್ದಕ್ಕಿದ್ದಂತೆ ಸಿದ್ಧರಾಮಯ್ಯ ವಿರೋಧಿ ಬಣದ ನಾಯಕರ ಸೂಚನೆ ಮೇರೆಗೆ ರಮೇಶ್ ಜಾರಕಿಹೊಳಿ ಹತ್ತಕ್ಕೂ ಹೆಚ್ಚು ಶಾಸಕರೊಂದಿಗೆ ಅಜ್ಮೀರ್‍ಗೆ ತೆರಳಿದ್ದು ಜನಾರ್ಧನ ರೆಡ್ಡಿ ಪಡೆಯ ಪ್ರಮುಖ ನಾಯಕ ಬಿ.ಶ್ರೀರಾಮುಲು ಜೊತೆ ಸಂಪರ್ಕದಲ್ಲಿದ್ದಾರೆ.

ಒಂದು ವೇಳೆ ಮಂತ್ರಿ ಮಂಡಲ ವಿಸ್ತರಣೆಯ ಸಂದರ್ಭದಲ್ಲಿ ತಮ್ಮನ್ನು ಕೈ ಬಿಟ್ಟು ಸತೀಶ್ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡರೆ ತಾವು ಮತ್ತು ತಮ್ಮ ಬೆಂಬಲಿಗರು ರಾಜೀನಾಮೆ ಕೊಡುವುದಾಗಿ ರಮೇಶ್ ಜಾರಕಿಹೊಳಿ ಬಿಗಿಪಟ್ಟು ಹಿಡಿದಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ಮಧ್ಯೆ ಸರ್ಕಾರ ರಚಿಸುವ ವಿಷಯದಲ್ಲಿ ಬಿಜೆಪಿ ನಾಯಕ ಯಡಿಯೂರಪ್ಪ ಕೂಡ ಕಾತುರದಲ್ಲಿದ್ದು, ಇದಕ್ಕೆ ಪೂರಕವಾಗಿ ಶಕ್ತಿ ಒದಗಿಸಿದರೆ ನಿಮ್ಮನ್ನು ಉಪಮುಖ್ಯಮಂತ್ರಿ ಹುದ್ದೆಗೆ ತಂದು ಕೂರಿಸುವುದಾಗಿ ಬಿ.ಶ್ರೀರಾಮುಲು ಅವರಿಗೆ ಹೇಳಿದ್ದಾರೆನ್ನಲಾಗಿದೆ.

ಇದೇ ಕಾರಣಕ್ಕಾಗಿ ಬಿ.ಶ್ರೀರಾಮುಲು ನಿರಂತರವಾಗಿ ಕಾಂಗ್ರೆಸ್ ಭಿನ್ನಮತೀಯ ಶಾಸಕರ ಸಂಪರ್ಕದಲ್ಲಿದ್ದು ಈ ಬೆಳವಣಿಗೆ ಸಹಜವಾಗಿಯೇ ರಾಜಕೀಯ ವಲಯಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಈ ಮಧ್ಯೆ ಬಿಜೆಪಿ ಏನಾದರೂ ಆಪರೇಷನ್ ಕಮಲ ಕಾರ್ಯಾಚರಣೆಗೆ ಮುಂದಾದರೆ ಬಿಜೆಪಿಯಿಂದಲೇ ಹಲವು ಶಾಸಕರು ರಾಜೀನಾಮೆ ಕೊಡುವಂತೆ ನೋಡಿಕೊಳ್ಳುತ್ತೇನೆ. ಆ ಮೂಲಕ ಸರ್ಕಾರ ಉಳಿಸಿಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆಪ್ತರೆದುರು ಹೇಳಿಕೊಂಡಿದ್ದು ಅಲ್ಲಿಗೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಕರ್ನಾಟಕದ ರಾಜಕೀಯ ಪರಿಸ್ಥಿತಿ ಅತ್ಯಂತ ಡೋಲಾಯಮಾನವಾಗುವುದು ನಿಶ್ಚಿತವಾಗಿದೆ.

Facebook Comments

Sri Raghav

Admin