ಶಿರೂರು ಶ್ರೀ ಸಾವಿಗೆ ಕಾರಣವೇನು..? ದಟ್ಟವಾಗುತ್ತಿವೆ ಅನುಮಾನಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Shirooru-Swamiji

ಉಡುಪಿ, ಜು.19- ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠದ ಮಠಾಧೀಶರಾದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಅವರಿಗೆ 55 ವರ್ಷ ವಯಸ್ಸಾಗಿತ್ತು. ಅವರ ಸಾವು ನಿಗೂಡವಾಗಿದ್ದು, ಸಾವು ಹೇಗೆ ಸಂಭವಿಸಿದೆ ಎಂಬುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಶಿರೂರು ಸ್ವಾಮೀಜಿ ಭಕ್ತರು ಆರೋಪಿಸಿದ್ದಾರೆ.

ವಿಷ ಪ್ರಾಷನವಾಗಿದೆಯೋ ಅಥವಾ ಸ್ವಾಮೀಜಿ ಸೇವಿಸಿದ ಆಹಾರ ವಿಷವಾಗಿದೆಯೋ ಎಂಬ ಶಂಕೆ ವ್ಯಕ್ತವಾಗಿದೆ. ಶ್ರೀಗಳ ಮೃತ ಶರೀರವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಜುಲೈ 16ರಂದು ಶಿರೂರು ಮೂಲ ಮಠದಲ್ಲಿ ಆಯೋಜಿಸಿದ್ದ ವನಮಹೋತ್ಸವದ ವೇಳೆ ಆಹಾರ ಸೇವಿಸಿದ್ದ ಬಳಿಕ ಅವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿತ್ತು. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವರನ್ನು ಮೊದಲು ಉಡುಪಿಯ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ಸುಧಾರಣೆಯಾಗದ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ನಿನ್ನೆ ರಾತ್ರಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ರಕ್ತಸ್ರಾವ ಹಾಗೂ ಉಸಿರಾಟ ತೊಂದರೆಯಿಂದ ಸ್ವಾಮೀಜಿಯವರು ಇಂದು ಬೆಳಗ್ಗೆ 8.30ಕ್ಕೆ ನಿಧನರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯ ಡಾ.ಅವಿನಾಶ ಶೆಟ್ಟಿ ತಿಳಿಸಿದ್ದಾರೆ.

ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗಿದ್ದು, ಅವರು ಸೇವಿಸಿರುವ ಆಹಾರ ವಿಷಯವಾಗಿರಬಹುದು ಅಥವಾ ವಿಷಪ್ರಾಸನವಾಗಿರಬಹುದು ಎಂಬ ಅನುಮಾನವಿದೆ. ಮೃತ ಶರೀರವನ್ನು ಮರಣೋತ್ತರ ಪರೀಕ್ಷೆ ಗೆ ಕಳುಹಿಸಲಾಗಿದೆ. ಎಲ್ಲಾ ಮಾಹಿತಿಗಳನ್ನು ಪೆÇಲೀಸರಿಗೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪಟ್ಟದೇವರ ವಿಷಯದಲ್ಲಿ ಅಷ್ಟ ಮಠದ ವಿರುದ್ಧ ಶಿರೂರು ಶ್ರೀಗಳು ತಿರುಗಿ ಬಿದ್ದಿದ್ದರು. ವಿಠಲನ ಮೂರ್ತಿಯನ್ನು ಹಿಂದಿರುಗಿಸದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ. ಈ ಸಂಬಂಧ ಕಾನೂನು ಹೋರಾಟ ಮಾಡುವುದಾಗಿಯೂ ಕಳೆದೆರೆಡು ದಿನಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿ ಎಚ್ಚರಿಕೆ ನೀಡಿದ್ದರು.

ರಾಜಕಾರಣದಲ್ಲಿಯೂ ಆಸಕ್ತಿ ಹೊಂದಿದ್ದ ಶ್ರೀಗಳು ಬಿಜೆಪಿ ಸೇರಲು ಮುಂದಾಗಿದ್ದರು. ಅಲ್ಲದೆ, ಉಡುಪಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದರು. ಕೊನೆ ಗಳಿಗೆಯಲ್ಲಿ ನಾಮಪತ್ರ ವಾಪಸ್ ಪಡೆದಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದ್ದಕ್ಕಿದ್ದಂತೆ ಶ್ರೀಗಳು ನಿಗೂಡವಾಗಿ ಸಾವನ್ನಪ್ಪಿರುವುದು ಭಕ್ತ ವೃಂದದಲ್ಲಿ ತೀವ್ರ ಶಂಕೆ ಉಂಟು ಮಾಡಿದೆ.

ಬಹುಮುಖ ಪ್ರತಿಭೆಯ ಶ್ರೀಗಳು
8ನೆ ವಯಸ್ಸಿಗೆ ಸನ್ಯಾಸ ಸ್ವೀಕರಿಸಿದ ಶ್ರೀಗಳು ಬಹುಮುಖ ಪ್ರತಿಭೆ ಹೊಂದಿದ್ದರು. ಶಿರೂರು ಮಠದ 30ನೆ ಯತಿಗಳಾಗಿದ್ದ ಅವರು,ಮೂರು ಪರ್ಯಾಯ ಪೂರೈಸಿದ್ದ ರು. ವಿಠ್ಠಲ ಆಚಾರ್ಯ-ಕುಸುಮಾಚಾರ್ಯ ದಂಪತಿ ಪುತ್ರರಾದ ಶ್ರೀಗಳು 1971ರಲ್ಲಿಯೇ ಸನ್ಯಾಸ ಸ್ವೀಕರಿಸಿದ್ದರು.  ಹೆಬ್ರಿ ತಾಲೂಕಿನ ಮಡಮಕ್ಕಿ ಗ್ರಾಮದಲ್ಲಿ ಶ್ರೀಗಳ ಮೂಲ ಮನೆಯಿದೆ. ಸಂಗೀತ ಪ್ರೇಮಿಯೂ ಆದ ಇವರು ಡ್ರಮ್ ಬಾರಿಸುವುದು, ಉತ್ತಮ ಈಜುಪಟು, ಕರಾಟೆಯಲ್ಲೂ ನಿಪುಣರಾಗಿದ್ದರು. ಈ ಹಿಂದೆ ಗೋಪಾಲ್ ಕಾರ್ವಿ ಅವರು ಮಲ್ಪೆ ಸಮುದ್ರದಲ್ಲಿ ಗಿನ್ನಿಸ್ ರೆಕಾರ್ಡ್ ನಿರ್ಮಿಸುವ ಉದ್ದೇಶದಿಂದ ಮ್ಯಾರಥಾನ್ ಈಜಿನ ಸಂದರ್ಭದಲ್ಲಿ ಶ್ರೀಗಳವರು ಸಹ ಕೆಲವು ಕಿಲೋಮೀಟರ್‍ಗಳಷ್ಟು ದೂರ ಸಮುದ್ರದಲ್ಲಿ ಈಜಿ ತಾವೊಬ್ಬ ಉತ್ತಮ ಈಜುಪಟು ಎಂಬುದನ್ನು ನಿರೂಪಿಸಿದ್ದರು. ಎಲ್ಲರೊಡನೆ ಬೆರೆಯುವ ಸ್ವಭಾವ ಇವರದಾಗಿತ್ತು.

ಶ್ರೀಗಳ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಇಡೀ ಭಕ್ತಸಮೂಹ ಕಣ್ಣೀರಿಟ್ಟಿತು. ಅಷ್ಟ ಮಠಗಳ ಸಂಪ್ರದಾಯದಂತೆ ಅಂತಿಮ ಸಂಸ್ಕಾರದ ವಿಧಿ-ವಿಧಾನಗಳು ನಡೆಯಲಿವೆ. ಕೃಷ್ಣಮಠದ ರಥಬೀದಿಯಲ್ಲಿ ಪಾರ್ಥಿವ ಶರೀರವನ್ನು ಮೆರವಣಿಗೆಯಲ್ಲಿ ತರಲಾಗುವುದು. ಕೃಷ್ಣ ದರ್ಶನ ಬಳಿಕ ಶಿರೂರು ಮೂಲ ಮಠಕ್ಕೆ ಒಯ್ಯಲಾಗುವುದು ಎಂದು ಮಠದ ಮೂಲಗಳು ಹೇಳಿವೆ.

ಶ್ರೀಗಳ ನಿಧನದಿಂದ ಇಡೀ ಊರಿಗೆ ಊರೇ ದುಃಖಸಾಗರದಲ್ಲಿ ಮುಳುಗಿದೆ. ಅಂತಿಮ ದರ್ಶನಕ್ಕೆ ಭಕ್ತರ ದಂಡೇ ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದು, ಶಿರೂರಿನಲ್ಲಿ ನೀರವ ಮೌನ ಆವರಿಸಿದೆ.  ಶ್ರೀಗಳ ನಿಧನಕ್ಕೆ ಅನೇಕ ಗಣ್ಯರು, ಮಠಾಧೀಶರು ಸಂತಾಪ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin