ಶಕ್ತಿ ಪ್ರದರ್ಶನ ಮಾಡುತ್ತಿರುವ ಜಾರಕಿಹೊಳಿ ಸಹೋದರರ ವಿರುದ್ಧ ಹೈಕಮಾಂಡ್ ಗರಂ

ಈ ಸುದ್ದಿಯನ್ನು ಶೇರ್ ಮಾಡಿ

Ramesh-Jarakihile-And-Satis

ಬೆಂಗಳೂರು, ಜು.20-ಪ್ರವಾಸದ ನೆಪದಲ್ಲಿ ಶಾಸಕರ ಮೂಲಕ ಶಕ್ತಿ ಪ್ರದರ್ಶನ ಮಾಡಿ ಸಮ್ಮಿಶ್ರ ಸರ್ಕಾರದ ಹಾದಿಗೆ ಅಡ್ಡವಾಗುತ್ತಿರುವ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಅವರ ನಡೆಗೆ ಹೈಕಮಾಂಡ್ ಗರಂ ಆಗಿದೆ. ಹಲವು ಶಾಸಕರೊಂದಿಗೆ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅಜ್ಮೀರ್ ಪ್ರವಾಸ ಕೈಗೊಂಡಿದ್ದಲ್ಲದೆ ಈಗ ಸತೀಶ್ ಜಾರಕಿಹೊಳಿ ಅವರು ಹಾಲಿ ಹಾಗೂ ಮಾಜಿ ಶಾಸಕರೊಂದಿಗೆ ಸಿಕ್ಕಿಂ ಪ್ರವಾಸ ಕೈಗೊಂಡಿರುವುದು ಕಾಂಗ್ರೆಸ್ ವರಿಷ್ಠರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು. ಮುಂಬರುವ 2019ರ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ದೇಶದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂಬ ದೂರದೃಷ್ಟಿ ಹಿನ್ನೆಲೆಯಲ್ಲಿ ಜೆಡಿಎಸ್ ಜತೆ ಸೇರಿ ಸಮ್ಮಿಶ್ರ ಸರ್ಕಾರ ಮಾಡಲಾಗಿತ್ತು. ಸಮ್ಮಿಶ್ರ ಸರ್ಕಾರ ಸುಗಮವಾಗಿ ನಡೆಯಲು ಹಲವು ಮಹತ್ವದ ಒಪ್ಪಂದಗಳನ್ನು ಕೂಡ ಮಾಡಿಕೊಳ್ಳಲಾಗಿತ್ತು.

ಸರ್ಕಾರ ಸುಗಮವಾಗಿ ನಡೆಯುತ್ತಿರುವ ಸಂದರ್ಭದಲ್ಲಿ ಜಾರಕಿಹೊಳಿ ಸಹೋದರರು ಶಾಸಕರನ್ನು ಕಟ್ಟಿಕೊಂಡು ಪ್ರವಾಸಕ್ಕೆ ತೆರಳುತ್ತಿರುವುದು ಆತಂಕ ಸೃಷ್ಟಿಸುತ್ತಿದೆ. ಸಮ್ಮಿಶ್ರ ಸರ್ಕಾರದಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾದರೂ ಇದರ ಲಾಭ ಪಡೆಯಲು ಪ್ರಬಲ ವಿರೋಧ ಪಕ್ಷವಾಗಿರುವ ಬಿಜೆಪಿ ಚಾತಕ ಪಕ್ಷಿಯಂತೆ ಕಾಯುತ್ತಿದೆ. ಇಂತಹ ಸಂದರ್ಭದಲ್ಲಿ ಜಾರಕಿಹೊಳಿ ಸೋದರರು ಶಾಸಕರುಗಳೊಂದಿಗೆ ಪ್ರವಾಸಕ್ಕೆ ತೆರಳುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವುದು ಎಷ್ಟು ಸಮಂಜಸ ಎಂಬುದು ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳ ನೇಮಕಕ್ಕೆ ಹೈಕಮಾಂಡ್ ಮುಂದಾಗಿರುವ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆದಿವೆ. ಸಂಪುಟದಲ್ಲಿ ಸ್ಥಾನ ಪಡೆಯಲು ಸತೀಶ್ ಜಾರಕಿಹೊಳಿ ಶಾಸಕರೊಂದಿಗೆ ಪ್ರವಾಸ ಕೈಗೊಂಡಿದ್ದಾರೆ ಎಂದೇ ಹೇಳಲಾಗುತ್ತಿದೆಯಲ್ಲದೆ ತಮ್ಮ ಬೆಂಬಲಿಗ ಶಾಸಕರುಗಳಿಗೆ ನಿಗಮ-ಮಂಡಳಿಗಳಲ್ಲಿ ಸ್ಥಾನ ಕೊಡಿಸಲು ಈ ರೀತಿ ಶಕ್ತಿ ಪ್ರದರ್ಶನದ ತಂತ್ರ ಅನುಸರಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಿರುವ ಸಂದರ್ಭದಲ್ಲಿ ಸರ್ಕಾರದ ಭಾಗವಾಗಿರುವ ಸಚಿವರು, ಶಾಸಕರೊಂದಿಗೆ ಶಕ್ತಿ ಪ್ರದರ್ಶನಕ್ಕೆ ಮುಂದಾಗುವುದು ಹಾಗೂ ಇವರ ಸೋದರ ಪ್ರಭಾವಿ ಸಮುದಾಯದ ಮುಖಂಡರೂ ಆದ ಮತ್ತೊಬ್ಬರು ಮತ್ತಷ್ಟು ಶಾಸಕರೊಂದಿಗೆ ಮತ್ತೊಂದು ಕಡೆ ಪ್ರವಾಸ ಕೈಗೊಂಡು ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವುದು ಕಾಂಗ್ರೆಸ್ ವಲಯದಲ್ಲಿ ಗೊಂದಲ ಸೃಷ್ಟಿಸಿದೆ.

ಈ ಎಲ್ಲ ಬೆಳವಣಿಗೆಗಳಿಗೆ ಹೈಕಮಾಂಡ್ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ,ಲೋಕಸಭೆ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದು ಕಾಂಗ್ರೆಸ್ ಹಿರಿಯ ನಾಯಕರ ಅಭಿಪ್ರಾಯವಾಗಿದೆ. ಇಬ್ಬರು ಸಹೋದರರು ನಮ್ಮ ಪ್ರವಾಸಕ್ಕೆ ಅಪಾರ್ಥ ಕಲ್ಪಿಸುವುದು ಬೇಡ. ಚುನಾವಣಾ ಪೂರ್ವದಲ್ಲಿ ಅಜ್ಮೀರ್‍ಗೆ ಬರುವುದಾಗಿ ಹರಕೆ ಹೊತ್ತಿದ್ದೆವು. ಅದರಂತೆ ಹೋಗುತ್ತಿದ್ದೇವೆ ಎಂದು ರಮೇಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.

ಅದೇ ರೀತಿ ಸಾಮಾನ್ಯವಾಗಿ ಪ್ರವಾಸ ಮಾಡುತ್ತೇವೆ. ಅದರಂತೆ ಸಮಾನ ಮನಸ್ಕರೆಲ್ಲ ಪ್ರವಾಸಕ್ಕೆ ತೆರಳುತ್ತೇವೆ ಎಂದು ಸತೀಶ್ ಜಾರಕಿಹೊಳಿ ಸಮರ್ಥಿಸಿಕೊಂಡಿದ್ದಾರೆ. ಆದರೆ, ರಾಜಕೀಯ ಸೂಕ್ಷ್ಮ ಸನ್ನಿವೇಶಗಳಲ್ಲಿ ಈ ರೀತಿಯ ಪ್ರವಾಸಗಳು ಬೇರೆಯದೇ ಸಂದೇಶ ರವಾನಿಸುತ್ತವೆ. ವಿಪಕ್ಷಗಳ ಕೈಗೆ ಅಸ್ತ್ರವನ್ನು ಕೊಟ್ಟಂತಾಗುತ್ತದೆ. ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಂತಾಗುತ್ತದೆ. ಹಾಗಾಗಿ ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತದೆ. ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರು ಚಿಕಿತ್ಸೆಗೆಂದು ಧರ್ಮಸ್ಥಳದ ಉಜಿರೆ ಪ್ರಕೃತಿ ಚಿಕಿತ್ಸಾಲಯ ಕೇಂದ್ರದಲ್ಲಿದ್ದಾಗ ರಮೇಶ್ ಜಾರಕಿಹೊಳಿ ಅವರು ತಮ್ಮ ಬೆಂಬಲಿಗರೊಂದಿಗೆ ಅಲ್ಲಿಗೆ ತೆರಳಿದ್ದು ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

Facebook Comments

Sri Raghav

Admin