ಬಿಬಿಎಂಪಿ ಚುಕ್ಕಾಣಿ ಹಿಡಿಯಲು ಭಾರಿ ಪೈಪೋಟಿ, ಜೆಡಿಎಸ್‍ಗೆ ಒಲಿಯುವುದೇ ಮೇಯರ್ ಪಟ್ಟ

ಈ ಸುದ್ದಿಯನ್ನು ಶೇರ್ ಮಾಡಿ

BBMP-Next-Mayors
ಬೆಂಗಳೂರು, ಜು.20- ಬಿಬಿಎಂಪಿ ಮೇಯರ್ ಸಂಪತ್‍ರಾಜ್ ಅವರ ಅವಧಿ ಸೆಪ್ಟೆಂಬರ್‍ಗೆ ಅಂತ್ಯಗೊಳ್ಳಲಿರುವ ಹಿನ್ನೆಲೆಯಲ್ಲಿ ಹೊಸ ಮೇಯರ್ ಆಯ್ಕೆ ಪ್ರಕ್ರಿಯೆ ಚುರುಕುಗೊಂಡಿದೆ.  ಮುಂದಿನ ಮೇಯರ್ ಮೀಸಲಾತಿ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಹಿರಿಯ ಮಹಿಳಾ ಸದಸ್ಯರು ನಗರದ ಪ್ರಥಮ ಪ್ರಜೆ ಸ್ಥಾನ ಅಲಂಕರಿಸಲು ಲಾಬಿ ಆರಂಭಿಸಿದ್ದಾರೆ.  ಕಾಂಗ್ರೆಸ್‍ನ ಹಿರಿಯ ಮಹಿಳಾ ಸದಸ್ಯರಾದ ಸೌಮ್ಯಾ ಶಿವಕುಮಾರ್, ಲಾವಣ್ಯ ಗಣೇಶ್‍ರೆಡ್ಡಿ, ಗಂಗಾಂಬಿಕೆ, ಫರೀದಾ ಇಫ್ತಿಯಾರ್, ಆಶಾ ಸುರೇಶ್ ಹಾಗೂ ಕೋಕಿಲಾ ಚಂದ್ರಶೇಖರ್ ಅವರ ಹೆಸರುಗಳು ಮೇಯರ್ ಹುದ್ದೆಗೆ ಪ್ರಮುಖವಾಗಿ ಕೇಳಿಬರುತ್ತಿವೆ.
ಸಂಪತ್‍ರಾಜ್ ಆಯ್ಕೆಗೂ ಮುನ್ನ ಬಿಸಿಎಂ(ಬಿ)ಗೆ ಮೀಸಲಾಗಿದ್ದ ಮೇಯರ್ ಸ್ಥಾನವನ್ನು ಅಲಂಕರಿಸಲು ಶಾಂತಲಾನಗರದ ಸೌಮ್ಯ ಶಿವಕುಮಾರ್ ಅವರು ಪ್ರಯತ್ನಪಟ್ಟಿದ್ದರು.

ಆದರೆ, ಕಾಂಗ್ರೆಸ್ ಹೈಕಮಾಂಡ್ ಜಿ.ಪದ್ಮಾವತಿ ಅವರಿಗೆ ಅವಕಾಶ ನೀಡಿ ಮುಂದಿನ ದಿನಗಳಲ್ಲಿ ನಿಮ್ಮನ್ನು ಪರಿಗಣಿಸಲಾಗುವುದು ಎಂದು ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಈ ಬಾರಿ ಮೇಯರ್ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲಿರಿಸಿರುವುದರಿಂದ ನನಗೆ ಅವಕಾಶ ನೀಡಬೇಕು ಎಂದು ಸೌಮ್ಯ ಶಿವಕುಮಾರ್ ಅವರು ವರಿಷ್ಠರಿಗೆ ಮನವಿ ಮಾಡಿಕೊಂಡಿದ್ದಾರೆ.  ಅದೇ ರೀತಿ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಅವರ ಸಂಬಂಧಿಯೂ ಆಗಿರುವ ಲಾವಣ್ಯ ಗಣೇಶ್‍ರೆಡ್ಡಿ ಅವರು ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ತಮ್ಮ ಪ್ರಭಾವ ಬಳಸಿ ಪ್ರಥಮ ಪ್ರಜೆ ಸ್ಥಾನ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಜಯನಗರದಿಂದ ಗೆದ್ದು ಬರುತ್ತಿರುವ ಗಂಗಾಂಬಿಕೆ, ಎಚ್‍ಎಂಟಿ ವಾರ್ಡ್‍ನ ಆಶಾ ಸುರೇಶ್ ಹಾಗೂ ಕೋಕಿಲಾ ಚಂದ್ರಶೇಖರ್ ಅವರು ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳಲು ಹರಸಾಹಸ ನಡೆಸುತ್ತಿದ್ದಾರೆ.

ಇದರ ಮಧ್ಯೆ ಕಳೆದ ಮೂರು ವರ್ಷಗಳಿಂದ ಬಿಬಿಎಂಪಿ ಆಡಳಿತಕ್ಕೆ ಸಹಕಾರ ನೀಡಿರುವುದರಿಂದ ಇದೊಂದು ಬಾರಿ ನಮಗೆ ಮೇಯರ್ ಸ್ಥಾನ ಬಿಟ್ಟುಕೊಡಿ ಎಂದು ಜೆಡಿಎಸ್ ಮುಖಂಡರು ಕಾಂಗ್ರೆಸ್ ಮೇಲೆ ಒತ್ತಡ ತರುತ್ತಿದ್ದಾರೆ. ಬಿಬಿಎಂಪಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಆಡಳಿತ ಜಾರಿಗೆ ಬಂದ ಮಾದರಿಯಲ್ಲೇ ರಾಜ್ಯದಲ್ಲೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಆಡಳಿತವಿರುವುದರಿಂದ ಜೆಡಿಎಸ್‍ನ ಈ ಬೇಡಿಕೆಗೆ ಮನ್ನಣೆ ದೊರೆತರೂ ಆಶ್ಚರ್ಯಪಡುವಂತಿಲ್ಲ.
ಒಂದು ವೇಳೆ ಜೆಡಿಎಸ್ ಬೇಡಿಕೆಗೆ ಕಾಂಗ್ರೆಸ್ ಸಮ್ಮತಿಸಿದರೆ ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ, ಜೆಡಿಎಸ್ ಗುಂಪಿನ ನಾಯಕಿ ನೇತ್ರಾ ನಾರಾಯಣ್ ಅಥವಾ ಮಂಜುಳಾ ನಾರಾಯಣಸ್ವಾಮಿ ಅವರಿಗೆ ಮೇಯರ್ ಸ್ಥಾನ ಅಲಂಕರಿಸುವ ಲಕ್ ಒದಗಿಬರಲಿದೆ. ಜೆಡಿಎಸ್‍ಗೆ ಮೇಯರ್ ಸ್ಥಾನ ಲಭಿಸಿದರೆ ಶಾಸಕ ಕೆ.ಗೋಪಾಲಯ್ಯ ಅವರ ಪತ್ನಿಯೂ ಆಗಿರುವ ಹೇಮಲತಾ ಅವರಿಗೆ ಅದೃಷ್ಟ ಒಲಿದುಬರುವ ಸಾಧ್ಯತೆಗಳಿವೆ.

ಕೇವಲ 36 ಸ್ಥಾನಗಳನ್ನು ಗೆದ್ದಿರುವ ಜೆಡಿಎಸ್‍ಗೆ ಮುಖ್ಯಮಂತ್ರಿ ಸ್ಥಾನವನ್ನೇ ಬಿಟ್ಟುಕೊಟ್ಟಿರುವುದರಿಂದ ಬಿಬಿಎಂಪಿಯಲ್ಲಿ ಅದೇ ಪಕ್ಷಕ್ಕೆ ಮೇಯರ್ ಸ್ಥಾನ ಬಿಟ್ಟುಕೊಡಲು ಹೇಗೆ ಸಾಧ್ಯ ಎನ್ನುವುದು ಕಾಂಗ್ರೆಸಿಗರ ಅಂಬೋಣ. ಆದರೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಮೈತ್ರಿ ಏರ್ಪಡಲಿರುವ ಹಿನ್ನೆಲೆಯಲ್ಲಿ ಮೇಯರ್ ಸ್ಥಾನವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟರೂ ಅಚ್ಚರಿಯೇನಿಲ್ಲ.

Facebook Comments

Sri Raghav

Admin