ಇಂದು ಯಾರಿಗೂ ಬೇಡವಾದ ಕಾವೇರಿ ನಿವಾಸ

ಈ ಸುದ್ದಿಯನ್ನು ಶೇರ್ ಮಾಡಿ

Cauvery--01

ಬೆಂಗಳೂರು,ಜು.20-ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಈಗಲೂ ಕೂಡ ಸಿದ್ದರಾಮಯ್ಯ ವಾಸವಿದ್ದ ಕಾವೇರಿ ನಿವಾಸ ಇಂದು ಯಾರಿಗೂ ಬೇಡವಾಗಿದೆ. ಕೆಲವು ದಿನಗಳ ಹಿಂದೆ ಡಾ. ಜಿ.ಪರಮೇಶ್ವರ್ ಈ ಬಂಗಲೆ ಮೇಲೆ ಕಣ್ಣು ಹಾಕಿದ್ದರು. ಆದರೆ ಸಿದ್ದರಾಮಯ್ಯ ಏಕೋ ಈ ನಿವಾಸ ಬಿಡಲು ಮನಸ್ಸು ಮಾಡಿರಲಿಲ್ಲ. ಸರ್ಕಾರ ಮನೆ ಹಂಚಿಕೆ ಮಾಡುವ ಸಂದರ್ಭ ಈ ನಿವಾಸ ಸಚಿವ ಕೆ.ಜೆ. ಜಾರ್ಜ್ ಪಾಲಿಗೆ ಹೋಗಿತ್ತು. ಅವರು ಕೂಡ ಇಲ್ಲಿ ನಾನು ವಾಸ್ತವ್ಯ ಹೂಡಲ್ಲ, ನನ್ನ ಬದಲು ಸಿದ್ದರಾಮಯ್ಯನವರೇ ಇಲ್ಲಿ ಉಳಿಯುತ್ತಾರೆ ಎಂದಿದ್ದರು.

ಬಹು ವರ್ಷಗಳ ಕನಸಾಗಿದ್ದ ಮುಖ್ಯಮಂತ್ರಿ ಕನಸು ನನಸಾಗಿಸಿ ಐದು ವರ್ಷ ವಾಸವಾಗಿದ್ದ ಕಾವೇರಿ ನಿವಾಸ ಬಿಡಲು ಸಿದ್ದರಾಮಯ್ಯಗೆ ಮನಸ್ಸಿರಲಿಲ್ಲ. ಇದೇ ಮನೆಯನ್ನು ಪಡೆಯಲು ಸಾಕಷ್ಟು ಪ್ರಯತ್ನವನ್ನೂ ಸಿದ್ದರಾಮಯ್ಯ ನಡೆಸಿದ್ದರು. ಸಮನ್ವಯ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನವಾಗಿಸಿಕೊಂಡು ಸರ್ಕಾರದಿಂದ ಇದೇ ಮನೆ ಪಡೆಯಲು ಪ್ರಯತ್ನ ಮಾಡಿದ್ದರಾದರೂ ಅದು ಸಾಧ್ಯವಾಗದೇ ಕಡೆಗೂ ನಿವಾಸ ಜಾರ್ಜ್ ಪಾಲಿಗೆ ಒಲಿದಿತ್ತು. ಅವರು ಮನೆ ಪಡೆಯದೇ ಸಿದ್ದರಾಮಯ್ಯಗೆ ಬಿಟ್ಟುಕೊಡುವ ನಿರ್ಧಾರ ಮಾಡಿದ್ದರು.

ಈ ನಿವಾಸ ಬೇಕು ಎಂದು ಡಾ. ಜಿ. ಪರಮೇಶ್ವರ್ ಕೂಡ ಪೈಪೋಟಿ ನಡೆಸಿದ್ದರು. ಉಪಮುಖ್ಯಮಂತ್ರಿಯಾಗಿ ಅಧಿಕಾರ ಪಡೆದ ಬಳಿಕ ಈ ನಿವಾಸ ಬೇಕೇಬೇಕೆಂದು ಕೂತಿದ್ದರು. ಆದರೆ ರಾಜಕೀಯ ಕಾರಣದಿಂದ ಅವರು ಹಿಂದೆ ಸರಿದಿದ್ದರು.

ಸಿದ್ದರಾಮಯ್ಯಗೂ ಬೇಡವಂತೆ :
ಸದ್ಯದ ಬೆಳವಣಿಗೆಯಲ್ಲಿ ಕಾವೇರಿ ನಿವಾಸ ತೊರೆದು ಬೇರೆಡೆ ತೆರಳಲು ಸಿದ್ದರಾಮಯ್ಯ ನಿರ್ಧರಿಸಿದ್ದು ನಾನು ಸಿಎಂ ಆಗಿದ್ದವನು. ಬೇರೆಯವರಿಗೆ ಹಂಚಿಕೆಯಾದ ಮನೆಯಲ್ಲಿ ವಾಸ್ತವ್ಯ ಹೂಡಿದರೆ ತಪ್ಪು ಸಂದೇಶ ರವಾನೆಯಾಗಲಿದೆ. ಇದರಿಂದ ವಿಜಯನಗರದಲ್ಲಿರುವ ಹಳೆ ಮನೆಗೆ ತೆರಳಲು ಚಿಂತನೆ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಕಾವೇರಿ ನಿವಾಸ ಹಂಚಿಕೆಯಾಗಿ ವಾರ ಕಳೆದರೂ ಇನ್ನೂ ಯಾರೂ ಪಡೆಯು ತ್ತಿಲ್ಲ. ಸಿದ್ದರಾಮಯ್ಯ ಬಿಡಲು ನಿರ್ಧರಿಸಿದ್ದು, ಇನ್ನು ಜಾರ್ಜ್ ಬಂದು ವಾಸ ಮಾಡುತ್ತಾರಾ ಅನ್ನುವುದನ್ನು ಕಾದು ನೋಡಬೇಕಿದೆ.

Facebook Comments

Sri Raghav

Admin