ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ದರ ಹೆಚ್ಚಳ ಮಾಡುವ ಪ್ರಸ್ತಾವನೆ ಬಂದಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Nandini-Milk-KMF
ಬೆಂಗಳೂರು, ಜು.20-ಕೆಎಂಎಫ್ ಮೂಲಕ ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ದರ ಹೆಚ್ಚಳ ಮಾಡುವ ಪ್ರಸ್ತಾವನೆ ಇದುವರೆಗೂ ಬಂದಿಲ್ಲ ಎಂದು ಪಶುಸಂಗೋಪನಾ ಸಚಿವ ವೆಂಕಟರಾವ್‍ನಾಡಗೌಡ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲು ಮಾರಾಟ ದರ ಹೆಚ್ಚಿಸುವಂತೆ ಸರ್ಕಾರಕ್ಕೆ ಇದುವರೆಗೂ ಪ್ರಸ್ತಾವನೆ ಬಂದಿಲ್ಲ. ರಾಜ್ಯದ ಹಾಲು ಉತ್ಪಾದನೆ ಪ್ರಮಾಣ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಮಾರುಕಟ್ಟೆ ವಿಸ್ತರಣೆ ಮಾಡುವ ಚಿಂತನೆ ನಡೆಸಲಾಗುತ್ತಿದೆ ಎಂದರು.

ಹೊರರಾಜ್ಯದ ಶೇ.40 ರಿಂದ 50 ಹಾಲು ರಾಜ್ಯದಲ್ಲಿ ಮಾರಾಟ ವಾಗುತ್ತಿದ್ದು, ನಿರ್ಬಂಧಿಸಲು ಸಾಧ್ಯವಿಲ್ಲ. ಆದರೆ ಕಲಬೆರಕೆ ಮಾರಾಟವಾಗುತ್ತಿದ್ದರೆ ನಿರ್ಬಂಧ ವಿಧಿಸಬಹುದು ಎಂದು ಹೇಳಿದರು. ಹಾಲಿನ ಗುಣಮಟ್ಟ ಪರೀಕ್ಷೆಯನ್ನು ಆರೋಗ್ಯ ಇಲಾಖೆ ನಡೆಸುತ್ತದೆ. ಕಲಬೆರಕೆ ಹಾಲು ಮಾರಾಟವಾಗುತ್ತಿರುವ ಬಗ್ಗೆ ಪರಿಶೀಲಿಸಲು ಸಹಕಾರ ಸಚಿವರನ್ನೊಳಗೊಂಡಂತೆ ಸಭೆ ಕರೆದು ಸೂಚನೆ ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಹಾಲು ಒಕ್ಕೂಟಗಳು ರೈತರಿಂದ ಖರೀದಿಸುವ ಹಾಲಿನ ದರವನ್ನು ಹೆಚ್ಚು, ಕಡಿಮೆ ಮಾಡುತ್ತವೆ. ಕೆಲವೊಮ್ಮೆ ಹಾಲಿನ ಉತ್ಪಾದನೆ ಹೆಚ್ಚಳವಾದರೆ, ಇನ್ನೂ ಕೆಲವೊಮ್ಮೆ ಕಡಿಮೆ ಇರುತ್ತದೆ. ಪರಿಸ್ಥಿತಿಗನುಗುಣವಾಗಿ ಹಾಲು ಒಕ್ಕೂಟಗಳೇ ಹಾಲಿನ ಖರೀದಿ ದರ ಪರಿಷ್ಕರಣೆ ಮಾಡುತ್ತದೆ ಎಂದರು.
ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದನೆಯಾಗುತ್ತಿದ್ದು, ಹಾಲಿನ ಪುಡಿ ಮಾಡಿದರೆ ಹೆಚ್ಚು ನಷ್ಟವಾಗುತ್ತದೆ. ಹಾಗಾಗಿ ಉಪಉತ್ಪನ್ನಗಳ ತಯಾರಿಕೆ ಮತ್ತು ಮಾರುಕಟ್ಟೆ ವಿಸ್ತರಣೆ ಕಡೆಗೆ ಗಮನಹರಿಸಲಾಗುವುದು ಎಂದರು. ಹಾಲು ಉತ್ಪಾದಕರಿಗೆ ನೀಡುವ ಲೀಟರ್‍ಗೆ 5 ರೂ. ಪ್ರೋತ್ಸಾಹ ಧನವನ್ನು ಮುಂದುವರೆಸುವುದಾಗಿ ತಿಳಿಸಿದರು.

Facebook Comments

Sri Raghav

Admin