ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಜಿ ಸಚಿವ ಹಾಗೂ ಶಾಸಕ ವಿ.ಸೋಮಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

somanna
ಬೆಂಗಳೂರು, ಜು.20- ಮಾಜಿ ಸಚಿವ ಹಾಗೂ ಶಾಸಕ ವಿ.ಸೋಮಣ್ಣ ಅವರ ಹುಟ್ಟುಹಬ್ಬದ ಅಂಗವಾಗಿ ಇಂದು ಒಂದು ಸಾವಿರ ಜನರಿಗೆ ಉಚಿತ ಹೆಲ್ತ್ ಕಾರ್ಡ್, ನೂರು ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ನಾಲ್ಕು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಲಾಯಿತು. ಸೋಮಣ್ಣ ಅವರು 68ನೆ ವಸಂತಕ್ಕೆ ಕಾಲಿರಿಸಿರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು 68 ಕೆಜಿ ತೂಕದ ಕೇಕ್ ಕತ್ತರಿಸಿ ಹಾಗೂ 150 ಕೆಜಿ ತೂಕದ ಸೇಬಿನ ಹಾರ ಹಾಕಿ ಹುಟ್ಟುಹಬ್ಬದ ಶುಭಾಶಯ ಕೋರಿದರು.

ಸಿದ್ದಗಂಗಾ ಮಠದ ಕಿರಿಯ ಶ್ರೀಗಳು ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಸೋಮಣ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವದಿಸಿದರು. ಮಾಜಿ ಡಿಸಿಎಂ ಆರ್.ಅಶೋಕ್, ಕಾಂಗ್ರೆಸ್ ಶಾಸಕ ಮುನಿರತ್ನ ಸೇರಿದಂತೆ ಹಲವಾರು ರಾಜಕೀಯ ಮುಖಂಡರುಗಳು ಸೋಮಣ್ಣ ಅವರ ನಿವಾಸಕ್ಕೆ ಆಗಮಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದರು.

15 ಸಾವಿರ ಲಡ್ಡು ವಿತರಣೆ

ಕಾವೇರಿಪುರ ವಿ.ಸೋಮಣ್ಣ ಅಭಿಮಾನಿ ಬಳಗದ ವತಿಯಿಂದ ಸೋಮಣ್ಣ ಹುಟ್ಟುಹಬ್ಬದ ಅಂಗವಾಗಿ ವಿದ್ಯಾರ್ಥಿಗಳಿಗೆ 15 ಸಾವಿರ ಲಡ್ಡು ವಿತರಿಸಲಾಯಿತು.
ಬಳಗದ ಪದಾಧಿಕಾರಿಗಳಾದ ಎಚ್.ಕುಮಾರ್, ಕೃಷ್ಣಮೂರ್ತಿ ಮತ್ತಿತರರು ಕ್ಷೇತ್ರದಲ್ಲಿರುವ 17 ಶಾಲಾ-ಕಾಲೇಜುಗಳ 15 ಸಾವಿರ ವಿದ್ಯಾರ್ಥಿಗಳಿಗೆ ಲಡ್ಡು ವಿತರಿಸಿ ಸಂಭ್ರಮಿಸಿದರು.

ರಾರಾಜಿಸಿದ ಕಟೌಟ್‍ಗಳು:

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಿಂದ ಸೋಮಣ್ಣ ಅವರು ಮತ್ತೆ ಶಾಸಕರಾಗಿ ಆರಿಸಿಬಂದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಕ್ಷೇತ್ರದಾದ್ಯಂತ ಸೋಮಣ್ಣ ಅವರ ಬೃಹತ್ ಕಟೌಟ್‍ಗಳನ್ನು ಹಾಕಿದ್ದರಿಂದ ಇಡೀ ಕ್ಷೇತ್ರ ಕಟೌಟ್‍ಗಳಿಂದ ರಾರಾಜಿಸುತ್ತಿತ್ತು.

ಜನಸಾಗರ: ಸೋಮಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಲು ಬೆಳಗ್ಗೆ 4 ಗಂಟೆಯಿಂದಲೇ ಅವರ ನಿವಾಸದ ಮುಂದೆ ಅಭಿಮಾನಿಗಳ ದಂಡು ಬೀಡುಬಿಟ್ಟಿತ್ತು. ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಬೆಳ್ಳಿ ಕಿರೀಟ ಹಾಗೂ ಗದೆ ನೀಡಿ ಸನ್ಮಾನಿಸಿದರು.  ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಅವರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಸೋಮಣ್ಣ ಅವರ ಪರ ಘೋಷಣೆ ಕೂಗಿ ಜೈಕಾರ ಹಾಕಿದರು.

Facebook Comments