ಶಿರೂರು ಶ್ರೀಗಳ ಸಾವಿನ ರಹಸ್ಯ ಬೇಧಿಸಲು ಎಸ್‍ಪಿ ನೇತೃತ್ವದಲ್ಲಿ 7 ತಂಡ ರಚನೆ

ಈ ಸುದ್ದಿಯನ್ನು ಶೇರ್ ಮಾಡಿ

Shirooru-swamiji

ಶಿರೂರು ಶ್ರೀಗಳ ಸಾವಿನ ರಹಸ್ಯ ಬೇಧಿಸಲು ಎಸ್‍ಪಿ ನೇತೃತ್ವದಲ್ಲಿ 7 ತಂಡ ರಚನೆ
ಬೆಂಗಳೂರು, ಜು.20-ಶಿರೂರು ಮಠದ ಲಕ್ಷ್ಮೀವರತೀರ್ಥ ಸ್ವಾಮೀಜಿ ಅವರ ಸಾವಿನ ಬಗ್ಗೆ ತನಿಖೆಗಾಗಿ ಉಡುಪಿ ಎಸ್‍ಪಿ ಅವರ ನೇತೃತ್ವದಲ್ಲಿ ಏಳು ತಂಡಗಳನ್ನು ರಚಿಸಲಾಗಿದೆ. ರಥಬೀದಿಯಲ್ಲಿರುವ ಶಿರೂರು ಮಠ ಹಾಗೂ ಮೂಲ ಮಠ ಸೇರಿದಂತೆ ಎರಡೂ ಮಠಗಳನ್ನು ತಮ್ಮ ಸುಪರ್ಧಿಗೆ ಪಡೆದಿರುವ ತನಿಖಾ ತಂಡಗಳು ಶ್ರೀಗಳ ಸಾವಿನ ಬಗ್ಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ತನಿಖೆ ಆರಂಭಿಸಿರುವ ತಂಡಗಳು, ಶ್ರೀಗಳು ಮಲಗುತ್ತಿದ್ದ ಕೋಣೆ, ಪೂಜಾಗೃಹ ಹಾಗೂ ಮಠದಲ್ಲಿದ್ದ ಪಾತ್ರೆ ಸೇರಿದಂತೆ ಪ್ರತಿಯೊಂದು ಪದಾರ್ಥಗಳ ಪರಿಶೀಲನೆ ನಡೆಸುತ್ತಿವೆ.

ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಹಾಗೂ ಬೆರಳಚ್ಚು ತಜ್ಞರು ತನಿಖಾ ತಂಡಗಳ ಜೊತೆ ಪರಿಶೀಲನೆ ನಡೆಸುತ್ತಿದ್ದಾರೆ. ಅನುಮಾನ ಬರುವ ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತಿದೆ. ಏಳು ತಂಡಗಳಲ್ಲಿ ಕೆಲ ತಂಡ ಮಠದಲ್ಲಿ ಪರಿಶೀಲನೆ ನಡೆಸುತ್ತಿದ್ದರೆ, ಮತ್ತೆ ಕೆಲವು ತಂಡ ವಿವಿಧೆಡೆ ತೆರಳಿ ಮಾಹಿತಿ ಕಲೆ ಹಾಕುತ್ತಿದೆ.

ಕಳೆದ ಜು.16 ರಂದು ಶಿರೂರು ಮೂಲಮಠದ ವನಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗವಹಿಸಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಪ್ರಸಾದ ತೆಗೆದುಕೊಂಡ ಸಂದರ್ಭದಲ್ಲಿ ಅಸ್ವಸ್ಥರಾಗಿದ್ದು, ಜು.17ರಂದು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದು, ಜು.18 ರಂದು ಉಡುಪಿಯ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದು, ಜು.19ರ ಬೆಳಿಗ್ಗೆ 8.30ರಲ್ಲಿ ನಿಧನರಾಗಿದ್ದಾಗಿನ ಸಂಪೂರ್ಣ ವಿವರಗಳನ್ನು ತನಿಖಾ ತಂಡಗಳು ಕಲೆ ಹಾಕುತ್ತಿವೆ.

ಮರಣೋತ್ತರ ವರದಿ ಇನ್ನೂ ಬಂದಿಲ್ಲ. ದೇಹದ ಕೆಲವು ಭಾಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಎಫ್‍ಎಸ್‍ಎಲ್ ವರದಿ ಬರಬೇಕಾಗಿದೆ. ಮರಣೋತ್ತರ ವರದಿ, ಎಫ್‍ಎಸ್‍ಎಲ್ ವರದಿ, ಪೊಲೀಸರ ತನಿಖೆಯ ವರದಿ ನಂತರ ಸಾವಿನ ಸತ್ಯಾಂಶ ಹೊರಬರಲಿದೆ. ಶಿರೂರು ಶ್ರೀಗಳ ಪೂರ್ವಾಶ್ರಮದ ಸಹೋದರರಾದ ಶಿರೂರು ಮಠದ ದಿವಾನ್ ಪಿ.ಲಾತವ್ಯ ಆಚಾರ್ಯ ಅವರು ಶ್ರೀಗಳ ಸಾವಿನ ಬಗ್ಗೆ ಶಂಕೆಯಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು ದೂರು ನೀಡಿದ ಹಿನ್ನೆಲೆಯಲ್ಲಿ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Facebook Comments

Sri Raghav

Admin