ಅಂತರಾಷ್ಟೀಯ ಮಟ್ಟದಲ್ಲಿ ಭಾರತದ ಮಾನ ಹರಾಜು, ಕಾಲ್‍ಸೆಂಟರ್ ಹಗರಣದಲ್ಲಿ 21 ಭಾರತೀಯರು ಜೈಲಿಗೆ..!

ಈ ಸುದ್ದಿಯನ್ನು ಶೇರ್ ಮಾಡಿ

Call-Center

ನ್ಯೂಯಾರ್ಕ್, ಜು.21-ಅಮೆರಿಕಾದ ನೂರಾರು ನಾಗರಿಕರಿಗೆ ಕೋಟ್ಯಂತರ ಡಾಲರ್ ವಂಚಿಸಿದ ಭಾರತ ಮೂಲದ ಬೃಹತ್ ಕಾಲ್‍ಸೆಂಟರ್ ಹಗರಣಕ್ಕೆ ಸಂಬಂಧಪಟ್ಟಂತೆ ಭಾರತೀಯ ಮೂಲದ 21 ಮಂದಿಗೆ 20 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಬಹುಕೋಟಿ ಡಾಲರ್ ಮೊತ್ತದ ಈ ಹಗರಣದ ಮೂಲಕ ಭಾರತದ ವಂಚಕರು ದೇಶದ ಮಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದ್ದು, ಭಾರತ ತಲೆತಗ್ಗಿಸುವಂತೆ ಮಾಡಿದ್ದಾರೆ.

ಅಮೆರಿಕಾದಲ್ಲಿ ಭಾರತೀಯ ಮೂಲದವರು ನಡೆಸಿದ ಅತ್ಯಂತ ದೊಡ್ಡ ಹಗರಣ ಇದಾಗಿದೆ. ಕಾಲ್‍ಸೆಂಟರ್ ಸೋಗಿನಲ್ಲಿ ನೂರಾರು ಅಮೆರಿಕನ್ನರಿಗೆ ಈ ಅಪರಾಧಿಗಳು ಕೋಟ್ಯಂತರ ಡಾಲರ್‍ನಷ್ಟು ವಂಚಿಸಿದ್ದಾರೆ. ಇದರಿಂದಾಗಿ ಕಾಲ್‍ಸೆಂಟರ್ ಮೇಲಿನ ನಂಬಿಕೆಯನ್ನು ಜನರು ಕಳೆದುಕೊಳ್ಳುವಂತಾಗಿದೆ ಎಂದು ಅಮೆರಿಕಾದ ಅಟಾರ್ನಿ ಜನರಲ್ ಜೆಫ್ ಸೆಷನ್ಸ್ ತಿಳಿಸಿದ್ದಾರೆ.

ಈ ಪ್ರಕರಣ ಬೆಳಕಿಗೆ ಬಂದ ನಂತರ ಒಟ್ಟು 21 ಮಂದಿ ಆರೋಪಿಗಳನ್ನು ಹಗರಣದಲ್ಲಿ ಹೆಸರಿಸಲಾಗಿತ್ತು. ಕೆಲವು ದಿನಗಳಿಂದ ಇದರ ವಿಚಾರಣೆ ಮುಂದುವರೆದಿದ್ದು, ಇಂದು ಎಲ್ಲಾ ಆರೋಪಿಗಳನ್ನು ದೋಷಿಗಳೆಂದು ಪರಿಗಣಿಸಿ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಆರೋಪಿಗಳಲ್ಲಿ ಬಹುತೇಕ ಮಂದಿ ದೊಡ್ಡ ಮಟ್ಟದ ವಂಚನೆ ಮತ್ತು ಹಣಕಾಸು ದುರುಪಯೋಗ ಹಾಗೂ ಅಕ್ರಮ ವಲಸೆ ಪ್ರಕರಣಗಳಲ್ಲೂ ಶಾಮೀಲಾಗಿದ್ದಾರೆ.

ಈ ಆರೋಪಿಗಳು ಅಮೆರಿಕಾದ ವಿವಿಧೆಡೆ ಕಾಲ್‍ಸೆಂಟರ್‍ಗಳನ್ನು ಸ್ಥಾಪಿಸಿ ವಿವಿಧ ಯೋಜನೆಗಳು ಮತ್ತು ಅವುಗಳಿಂದ ಅಪಾರ ಲಾಭದ ಆಮಿಷವೊಡ್ಡಿ ನೂರಾರು ಅಮೆರಿಕನ್ನರಿಂದ ಹಣ ವಸೂಲಿ ಮಾಡಿದ್ದರು. ಈ ವಂಚಕರು ವಾಗ್ದಾನ ಮಾಡಿದಂತೆ ನಿರೀಕ್ಷಿತ ಲಾಭ ದೊರೆಯದ ಹಿನ್ನೆಲೆಯಲ್ಲಿ ಚನೆಗೊಳಗಾದವರು ಪೊಲೀಸರಿಗೆ ದೂರು ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದ್ದು, ಇದರ ಹಿಂದಿನ ವ್ಯವಸ್ಥಿತ ಮೋಸದ ಜಾಲ ಪತ್ತೆಯಾಗಿ ಒಬ್ಬೊಬ್ಬರೆ ಬಲೆಗೆ ಸಿಕ್ಕಿಬಿದ್ದರು. ಗುಜರಾತ್ ಸೇರಿದಂತೆ ಭಾರತದ ವಿವಿಧ ರಾಜ್ಯಗಳ ವಂಚಕರೂ ಸಹ ವ್ಯವಸ್ಥಿತ ಜಾಲದಲ್ಲಿ ಶಾಮೀಲಾಗಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ 13 ಮಂದಿ ಭಾಗಿಯಾಗಿದ್ದು ಇನ್ನೂ ಐದು ಕಾಲ್‍ಸೆಂಟರ್‍ಗಳು ಜನರನ್ನು ವಂಚಿಸಿದ್ದು, ಈ ಬಗ್ಗೆ ವಿಚಾರಣೆ ತೀವ್ರಗೊಂಡಿದೆ.

Facebook Comments

Sri Raghav

Admin