ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ 25 ಮಂದಿ ನೈಜೀರಿಯಾ-ಉಗಾಂಡ ಪ್ರಜೆಗಳು ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.21- ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನಮಂಡಲ ಅಧಿವೇಶನದಲ್ಲಿ ಹೇಳಿದ ಬೆನ್ನಲ್ಲೆ ಕಾರ್ಯಾಚರಣೆ ನಡೆಸಿರುವ ವೈಟ್‍ಫೀಲ್ಡ್ ವಿಭಾಗದ ಪೊಲೀಸರು, 25 ಮಂದಿ ನೈಜೀರಿಯಾ ಮತ್ತು ಉಗಾಂಡ ಪ್ರಜೆಗಳನ್ನು ವಶಕ್ಕೆ ಪಡೆದು ಪಾಸ್‍ಪೋರ್ಟ್ ಮತ್ತಿತರ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

Nigerians--01

ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಧಿಕ ಸಂಖ್ಯೆಯ ಆಫ್ರಿಕನ್ ಪ್ರಜೆಗಳು ವಾಸವಾಗಿದ್ದಾರೆ. ಅವರಲ್ಲಿ ಕೆಲವರು ಪಾಸ್‍ಪೋರ್ಟ್, ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ವಾಸವಾಗಿದ್ದಾರೆ ಎಂದು ಪ್ರಾದೇಶಿಕ ವಿದೇಶಿ ನೋಂದಣಾಧಿಕಾರಿ ಇತ್ತೀಚೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವೈಟ್‍ಫೀಲ್ಡ್ ವಿಭಾಗದ ಕೆಆರ್‍ಪುರಂ, ವೈಟ್‍ಫೀಲ್ಡ್, ಕಾಡುಗೋಡಿ, ಎಚ್‍ಎಎಲ್, ಮಹದೇವಪುರ, ವರ್ತೂರು ಪೊಲೀಸ್ ಠಾಣೆಗಳ ಪೊಲೀಸ್ ಇನ್ಸ್‍ಪಕ್ಟರ್‍ಗಳ ನೇತೃತ್ವದಲ್ಲಿ ಆರು ತಂಡ ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಕಾರ್ಯಾಚರಣೆ ನಡೆಸಿತು.

ಆರು ತಂಡಗಳಲ್ಲಿ ಒಟ್ಟು 120ಕ್ಕೂ ಅಧಿಕ ಪೊಲೀಸರು, ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ಸಿ.ಪಾಳ್ಯ, ಬೃಂದಾವನ ಬಡಾವಣೆ, ಸೀಗೆಹಳ್ಳಿ, ಪ್ರಿಯಾಂಕ ನಗರ, ಆನಂದಪುರ, ಮಾರ್ಗೊಂಡನಹಳ್ಳಿ ಮತ್ತಿತರ ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ 25 ಮಂದಿ ನೈಜಿರೀಯಾ ಮತ್ತು ಉಗಾಂಡಾ ದೇಶದ ಪ್ರಜೆಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಆರೋಪಿಗಳ ಪೈಕಿ ಟಿ.ಸಿ.ಪಾಳ್ಯದ ಮಂಜುನಾಥ ಲೇಔಟ್‍ನಲ್ಲಿ ನೆಲೆಸಿದ್ದ ಸ್ಟೆನ್ಲೆ (27) ಎಂಬಾತನ ಬಳಿ 150 ಗ್ರಾಂ ಹಾಗೂ ಮತ್ತೋರ್ವನ ಬಳಿ 50 ಗ್ರಾಂ ಗಾಂಜಾ ದೊರೆತಿದ್ದು, ಅವರಿಬ್ಬರನ್ನು ಬಂಧಿಸಲಾಗಿದೆ.ಬಂಧನದ ಬಗ್ಗೆ ಪ್ರಾದೇಶಿಕ ವಿದೇಶಿ ನೋಂದಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರನ್ನು ಕರೆಸಿ ವಶಕ್ಕೆ ಪಡೆಯಲಾದ 25 ಆಫ್ರಿಕನ್ ಪ್ರಜೆಗಳ ಅಧಿಕೃತ ಪಾಸ್‍ಪೋರ್ಟ್, ವೀಸಾ, ವಾಸ ಪ್ರಮಾಣಪತ್ರ ಮತ್ತಿತರ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.

ಸರಿಯಾದ ದಾಖಲೆ ಹೊಂದದವರ ವಿರುದ್ಧ ಪಾಸ್‍ಪೋರ್ಟ್ ಕಾಯ್ದೆ, ವಿದೇಶಿ ಪ್ರಜೆಗಳ ಕಾಯ್ದೆ ಮತ್ತಿತರ ಕಾಯ್ದೆಗಳಡಿ ಕ್ರಮಕೈಗೊಳ್ಳಲಾಗುವುದು ಹಾಗೂ ಅಧಿಕೃತ ದಾಖಲಾತಿಗಳನ್ನು ಹೊಂದದ ಆಫ್ರಿಕನ್ ಪ್ರಜೆಗಳಿಗೆ ಮನೆ ಬಾಡಿಗೆ ನೀಡಿದ ಮನೆ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರಗಿಸಲಾಗುವುದು ಎಂದು ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.

Facebook Comments

Sri Raghav

Admin