ವಿದ್ಯುತ್ ತಂತಿ ತುಳಿದ ಪತ್ನಿಯನ್ನು ರಕ್ಷಿಸಲು ಬಂದ ಪತಿ ಕೂಡ ದುರಂತ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Elecrtic-shock-Coupels-Dead

ಬೆಂಗಳೂರು, ಜು.21- ಮನೆಯ ಮುಂದೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ನಡೆದಿದೆ. ಬಂಡೇಪಾಳ್ಯದ ಐಟಿಐ ಲೇಔಟ್‍ನ 9ನೇ ಕ್ರಾಸ್ ನಿವಾಸಿಗಳಾದ ಲಾವಣ್ಯ (26) ಮತ್ತು ವೀರಣ್ಣ ಅಲಿಯಾಸ್ ವೀರೇಶ್ (30) ಸಾವನ್ನಪ್ಪಿದ ದಂಪತಿ. ಲಾವಣ್ಯ ಅವರು ಕಳೆದ ರಾತ್ರಿ 10 ಗಂಟೆ ಸುಮಾರಿಗೆ ಬಟ್ಟೆ ಒಗೆಯಲು ಮನೆ ಮುಂದೆ ಬಂದಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ತಂತಿಯನ್ನು ಗಮನಿಸದ ಲಾವಣ್ಯ ಅದರ ಮೇಲೆ ಕಾಲಿಟ್ಟಿದ್ದು, ತಕ್ಷಣ ಕಿರುಚಿಕೊಂಡಿದ್ದಾರೆ. ಪತ್ನಿಯ ಬೊಬ್ಬೆ ಕೇಳಿ ಮನೆಯಿಂದ ಹೊರಗೆ ಓಡಿ ಬಂದ ಪತಿ ವೀರೇಶ್ ತಕ್ಷಣ ಪತ್ನಿಯನ್ನು ರಕ್ಷಿಸಲು ಮುಂದಾಗಿದ್ದಾರೆ. ಪರಿಣಾಮ ಅವರು ಕೂಡ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿದ್ದು, ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ತಮಿಳುನಾಡು ಮೂಲದವರಾದ ವೀರೇಶ್ ದಂಪತಿ ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದು ಐಟಿಐ ಬಡಾವಣೆಯಲ್ಲಿ ನೆಲೆಸಿದ್ದರು. ಪತಿ, ಪತ್ನಿಯರಿಬ್ಬರು ಚಕ್ಕುಲಿ, ನಿಪೀಟು ಮತ್ತಿತರ ತಿಂಡಿತಿನಿಸುಗಳನ್ನು ಮನೆಯಲ್ಲೇ ತಯಾರಿಸಿ ಅಂಗಡಿಗಳಿಗೆ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು. ದಂಪತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿದೆ. ವಿದ್ಯುತ್ ಅವಘಡ ಸಂದರ್ಭದಲ್ಲಿ ಒಂದು ಮಗು ಮನೆಯೊಳಗೆ ಮಲಗಿತ್ತು. ಮತ್ತೊಂದು ಮಗು ಅಜ್ಜಿಯ ಮನೆಯಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸೈಂಟ್ಸ್ ಜಾನ್ಸ್ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಬಂಡೇಪಾಳ್ಯ ಪೊಲೀಸರು ತಿಳಿಸಿದ್ದಾರೆ.

Facebook Comments

Sri Raghav

Admin