ಚುನಾವಣೆಗೆ ಸಜ್ಜಾಗುವಂತೆ ಪಕ್ಷದ ಮುಖಂಡರಿಗೆ ಕರೆ ಕೊಟ್ಟ ಮಾಜಿ ಪ್ರಧಾನಿ ದೇವೇಗೌಡ..!

ಈ ಸುದ್ದಿಯನ್ನು ಶೇರ್ ಮಾಡಿ

Devegowda
ಬೆಂಗಳೂರು,ಜು.21- ಪಕ್ಷ ಸಂಘಟನೆ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಲೋಕಸಭಾ ಚುನಾವಣೆ ಸಿದ್ಧತೆಗೆ ಸಂಬಂಧಿಸಿದಂತೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಇಂದು ಜೆಡಿಎಸ್ ಪ್ರಮುಖರ ಸಭೆ ನಡೆಸಲಾಯಿತು.  ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ನಡೆದ ಸಭೆಯಲ್ಲಿ ವಿವಿಧ ಭಾಗಗಳ ಪಕ್ಷದ ಮುಖಂಡರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದವರು,
ಶಾಸಕರು, ವಿಧಾನಪರಿಷತ್ ಸದಸ್ಯರು ಸಭೆಯಲ್ಲಿ ಪಾಲ್ಗೊಂಡು ಪಕ್ಷ ಸಂಘಟನೆ ಬಗ್ಗೆ ಸಮಾಲೋಚನೆ ನಡೆಸಿದರು.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಲೋಕಸಭೆ ಚುನಾವಣೆ ಕುರಿತು ಇಂದು ನಡೆದ ಪ್ರಮುಖರ ಸಭೆಯಲ್ಲಿ ಚರ್ಚಿಸಲಾಯಿತು.
ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದು, ಸರ್ಕಾರಕ್ಕೆ ಯಾವುದೇ ರೀತಿ ಧಕ್ಕೆ ಬಾರದಂತೆ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಲು ಗೌಡರು ಮಾರ್ಗದರ್ಶನ ಮಾಡಿದರು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚು ಮಂದಿ ಆಯ್ಕೆಯಾಗಲು ಈಗಿನಿಂದಲೇ ಶ್ರಮ ವಹಿಸಿ ಕೆಲಸ ಮಾಡಬೇಕು ಹಾಗೂ ಮುಂದಿನ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಇಂದಿನಿಂದಲೇ ಸಿದ್ಧತೆ ನಡೆಸಿಕೊಳ್ಳಬೇಕು ಎಂದು ಹೇಳಿದರು. ಕಾಂಗ್ರೆಸ್-ಜೆಡಿಎಸ್ ನಡುವೆ ಚುನಾವಣಾ ಪೂರ್ವ ಹೊಂದಾಣಿಕೆ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ. ಚುನಾವಣಾ ಪೂರ್ವ ಮೈತ್ರಿ ಬೇಕು, ಬೇಡವೇ ಎಂಬ ಬಗ್ಗೆ ಉಭಯ ಪಕ್ಷಗಳ ನಡುವೆ ಚರ್ಚೆ ನಡೆಯುತ್ತಿರುವಾಗಲೇ ಇಂದು ನಡೆದ ಜೆಡಿಎಸ್ ಮುಖಂಡರ ಸಭೆ ರಾಜಕೀಯ ವಲಯದಲ್ಲಿ ಮಹತ್ವ ಪಡೆದುಕೊಂಡಿದೆ.
ಶಾಸಕರಾದ ಕೆ.ಗೋಪಾಲಯ್ಯ, ವಿಧಾನಪರಿಷತ್ ಸದಸ್ಯರಾದ ಮನೋಹರ್, ಟಿ.ಎ.ಶರವಣ, ಅಪ್ಪಾಜಿಗೌಡ, ಮುಖಂಡರಾದ ಜಫರುಲ್ಲಾಖಾನ್,
ಎಂ.ಎಸ್.ನಾರಾಯಣರಾವ್, ಸುರೇಶ್‍ಬಾಬು ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

Facebook Comments