ಒಬ್ಬರಲ್ಲ, ಇಬ್ಬರಲ್ಲ 120ಕ್ಕೂ ಹೆಚ್ಚು ಮಹಿಳೆಯರ ರೇಪ್ ಮಾಡಿದ ಕಪಟ ಸನ್ಯಾಸಿ ಸೆರೆ..!

ಈ ಸುದ್ದಿಯನ್ನು ಶೇರ್ ಮಾಡಿ

Swamji--01

ಹಿಸ್ಸಾರ್, ಜು.21-ಸಾಧು-ಸಂತರ ಸೋಗಿನಲ್ಲಿ ಜನರನ್ನು ವಂಚಿಸುವ ಮತ್ತು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುವ ನಕಲಿ ಸನ್ಯಾಸಿಗಳ ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದೀಗ 120ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಕಪಟ ಸನ್ಯಾಸಿಯನ್ನು ಹರ್ಯಾಣ ಪೊಲೀಸರು ಬಂಧಿಸಿದ್ದಾರೆ.  ಬಾಬಾ ಅಮರಪುರಿ ಅಲಿಯಾಸ್ ಬಿಲ್ಲು(60) ಬಂಧಿತ ನಕಲಿ ಸಾಧು. ಈತನನ್ನು ಫತೇಹಾಬಾದ್‍ನ ತೋಹನಾ ಪಟ್ಟಣದಲ್ಲಿ ಪೊಲೀಸರು ಸೆರೆಹಿಡಿದಿದ್ದಾರೆ. ಈ ಕಾಮುಕ ಬಾಬಾ ಅನೇಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ ಆ ದೃಶ್ಯಗಳನ್ನು ವಿಡಿಯೋ ಮಾಡಿಕೊಂಡು ಅವರನ್ನು ಬ್ಲಾಕ್‍ಮೇಲ್ ಮಾಡಿ ಮತ್ತೆ ಅವರ ಮೇಲೆ ಅತ್ಯಾಚಾರ ಎಸಗುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆತನ ಪುಟ್ಟ ಆಶ್ರಮದ ಮೇಲೆ ದಾಳಿ ಮಾಡಿದ ಪೊಲೀಸರು ಇಂಥ 120ಕ್ಕೂ ಹೆಚ್ಚು ವಿಡಿಯೋ ತುಣುಕುಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿರುವ ಮಹಿಳೆಯರು ಬೇರೆ ಬೇರೆಯವರಾಗಿದ್ದು, ತನ್ನ ಸೆಲ್‍ಫೋನ್ ಮೂಲಕ ಈತನೇ ಕೃತ್ಯವನ್ನು ವಿಡಿಯೋ ಮಾಡುತ್ತಿದ್ದ. ಬಾಬಾನ ಸಂಬಂಧಿಕನೊಬ್ಬ ಈತನ ಕಾಮಲೀಲೆಗಳ ದೃಶ್ಯಗಳನ್ನು ಸಿಡಿ ಮಾಡಿ ಪೊಲೀಸರಿಗೆ ನೀಡಿದ. ಫತೇಹಾಬಾದ್ ಮಹಿಳಾ ಪೊಲೀಸ್ ಠಾಣೆ ಅಧಿಕಾರಿ ವಿಮಲಾದೇವಿ ಮತ್ತು ತಂಡ ಬಾಬಾನನ್ನು ಬಂಧಿಸಿದರು.

ನಕಲಿ ಬಾಬಾನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ಈತನಿಂದ ಮತ್ತಷ್ಟು ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗಿರುವ ಸಾಧ್ಯತೆ ಇದೆ. ಈತನ ವಿರುದ್ಧ ದೂರು ನೀಡಲು ಕೆಲವು ಮಹಿಳೆಯರು ಮುಂದೆ ಬಂದಿದ್ದಾರೆ ಎಂದು ಇನ್ಸ್‍ಪೆಕ್ಟರ್ ವಿಮಲಾದೇವಿ ತಿಳಿಸಿದ್ದಾರೆ.

Facebook Comments

Sri Raghav

Admin