29ರಂದು ಚಿಕ್ಕೋಡಿಯಲ್ಲಿ ಪ್ರಧಾನಿ ಮೋದಿಯಿಂದ ಬೃಹತ್ ರೈತ ಸಮಾವೇಶ

ಈ ಸುದ್ದಿಯನ್ನು ಶೇರ್ ಮಾಡಿ

Modi-Ayadiyurappa
ಬೆಂಗಳೂರು,ಜು.21- ಲೋಕಸಭೆಯಲ್ಲಿ ವಿಶ್ವಾಸ ಮತ ಗೆದ್ದು ಆತ್ಮವಿಶ್ವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇದೇ 29ರಂದು ಕುಂದಾನಗರಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಲೋಕಸಭಾ ಚುನಾವಣೆಗೆ ರಣ ಕಹಳೆ ಮೊಳಗಿಸಲಿದ್ದಾರೆ. ದೇಶಾದ್ಯಂತ 50 ರೈತ ರ್ಯಾಲಿಗಳನ್ನು ನಡೆಸಲಿರುವ ಮೋದಿ ಅವರು ಚಿಕ್ಕೋಡಿಯಲ್ಲಿ ಬೃಹತ್ ರೈತ ಸಮಾವೇಶ ನಡೆಸಿ ಲೋಕಸಭೆ ಚುನಾವಣೆಗೆ ಕಾರ್ಯಕರ್ತರನ್ನು ಹುರಿದುಂಬಿಸಲಿದ್ದಾರೆ.

ಈಗಾಗಲೇ ಉತ್ತರಪ್ರದೇಶ , ಪಶ್ಚಿಮ ಬಂಗಾಳದಲ್ಲಿ ಸಮಾವೇಶ ನಡೆಸಿ ಲೋಕಸಭೆ ಚುನಾವಣೆಗೆ ಪ್ರಚಾರಕ್ಕೆ ಮುನ್ನುಡಿ ಬರೆದಿದ್ದಾರೆ. ದಕ್ಷಿಣ ಭಾರತದಲ್ಲಿ ಕರ್ನಾಟಕದ ಮೂಲಕವೇ ಚುನಾವಣೆಗೆ ನಾಂದಿ ಹಾಡಲಿದ್ದಾರೆ. ವಿಧಾನಸಭೆ ಚುನಾವಣೆ ಮುಗಿದ ಬಳಿಕ ನರೇಂದ್ರ ಮೋದಿ ಮೊದಲ ಬಾರಿ ರಾಜ್ಯಕ್ಕೆ ಆಗಮಿಸುತ್ತಿರುವುದರಿಂದ ಈ ರ್ಯಾಲಿಯನ್ನು ಯಶಸ್ವಿಯಾಗಿ ನಡೆಸಲು ಬಿಜೆಪಿ ಪಣತೊಟ್ಟಿದೆ. ರಾಜ್ಯದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಸೆಡ್ಡು ಹೊಡೆಯುವ ರೀತಿಯಲ್ಲಿ ಸಮಾವೇಶ ನಡೆಸಿ ಶಕ್ತಿ ಪ್ರದರ್ಶಿಸಲು ರಾಜ್ಯ ಬಿಜೆಪಿ ನಾಯಕರು ಪಣ ತೊಟ್ಟಿದ್ದಾರೆ.

ಸುಮಾರು ಎರಡೂವರೆಯಿಂದ ಮೂರುವರೆ ಲಕ್ಷ ಕಾರ್ಯಕರ್ತರನ್ನು ಹುರಿದುಂಬಿಸಲಿರುವ ಮೋದಿ, ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ರೈತರಿಗೆ ಕೇಂದ್ರ ಸರ್ಕಾರ ಮಾಡಿರುವ ಸಾಧನೆಗಳನ್ನು ಮನವರಿಕೆ ಮಾಡಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿದ್ದರೂ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ 20 ಸಂಸದರನ್ನು ಗೆಲ್ಲಿಸಲು ಬಿಜೆಪಿ ತನ್ನದೇ ಆದ ಕಾರ್ಯತಂತ್ರವನ್ನು ರೂಪಿಸಿದೆ.

ಈಗಾಗಲೇ ಎರಡೂ ಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಸುಳಿವು ನೀಡಿರುವುದರಿಂದ ಏಕಾಂಗಿಯಾಗಿ ಸ್ಪರ್ಧಿಸಿ ಹೆಚ್ಚಿನ ಸ್ಥಾನಗಳಿಸಲು ಮಾರ್ಗೋಪಾಯ ಹುಡುಕಲಾಗಿದೆ.  ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಹಾವೇರಿ, ಗದಗ ಸೇರಿದಂತೆ ಮುಂಬೈ ಕರ್ನಾಟಕದ ಸುಮಾರು ಎರಡರಿಂದ ಮೂರವರೆ ಲಕ್ಷ ರೈತರು ಜು.29ರಂದು ನಡೆಯಲಿರುವ ಸಮಾವೇಶಕ್ಕೆ ಸೇರುವ ಸಂಭವವಿದೆ.

Facebook Comments

Sri Raghav

Admin