ಬಿಬಿಎಂಪಿಯಲ್ಲಿ ಆನ್‍ಲೈನ್ ನಕ್ಷೆ ಸಾಫ್ಟ್’ವೆರ್ ಕೆಟ್ಟು 6 ತಿಂಗಳಾದರು ಸರಿಪಡಿಸದ ಅಧಿಕಾರಿಗಳು

ಈ ಸುದ್ದಿಯನ್ನು ಶೇರ್ ಮಾಡಿ

bbmp
ಬೆಂಗಳೂರು, ಜು.21- ಹೆಸರಿಗೆ ಮಾತ್ರ ಸಿಲಿಕಾನ್ ಸಿಟಿ. ಆದರೆ ಇಲ್ಲಿ ಕೆಟ್ಟುಹೋಗಿರುವ ಒಂದು ಸಾಫ್ಟ್’ವೆರ್ ಅನ್ನು ಆರು ತಿಂಗಳಾದರೂ ರೆಡಿ ಮಾಡಲು ಆಗುತ್ತಿಲ್ಲ.  ಸಿಲಿಕಾನ್ ಸಿಟಿಯ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಬಿಎಂಪಿಯಲ್ಲಿ ಆನ್‍ಲೈನ್ ನಕ್ಷೆ ಮಂಜೂರಾತಿ ಸಾಫ್ಟ್’ವೆರ್ ಕೆಟ್ಟುಹೋಗಿ ಆರು ತಿಂಗಳಾಗಿದೆ. ಆದರೂ ಸಾಫ್ಟ್’ವೆರ್ಅನ್ನು ದುರಸ್ತಿ ಮಾಡಲು ಪಾಲಿಕೆಯ ಐಟಿ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ.

ಅಧಿಕಾರಿಗಳ ಈ ಬೇಜವಾಬ್ದಾರಿತನದಿಂದ ನಗರದಲ್ಲಿ ಮನೆ ಕಟ್ಟುವ ಕನಸು ಹೊತ್ತು ನಕ್ಷೆ ಮಂಜೂರಾತಿಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿರುವ ಸಾರ್ವಜನಿಕರು ಆರು ತಿಂಗಳು ಕಳೆದರೂ ಅನುಮತಿ ದೊರೆಯದೆ ಮನೆ ಕಟ್ಟಲು ಸಾಧ್ಯವಾಗದೆ ಅತಂತ್ರರಾಗಿದ್ದಾರೆ.  ಅಧಿಕಾರಿಗಳ ಈ ಬೇಜಾವಾಬ್ದಾರಿತನದಿಂದ ಕೇವಲ ನಾಗರಿಕರಿಗೆ ಮಾತ್ರ ಅನ್ಯಾಯವಾಗಿಲ್ಲ, ಪಾಲಿಕೆ ಬೊಕ್ಕಸಕ್ಕೂ ಕೋಟ್ಯಂತರ ರೂ. ನಷ್ಟ ಸಂಭವಿಸಿದೆ. ಆದರೂ ಸಂಬಂಧಪಟ್ಟವರು ಈ ಬಗ್ಗೆ ಚಕಾರವೆತ್ತದೆ ಮೌನಕ್ಕೆ ಶರಣಾಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ನಕ್ಷೆ ಮಂಜೂರಾತಿಗೆ ಅನುಮತಿ ದೊರೆಯದೆ ಸಾರ್ವಜನಿಕರು ಪರದಾಡುತ್ತಿದ್ದರೂ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಶಕೀಲ್ ಅಹಮ್ಮದ್ ಮಾತ್ರ ತಮಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವುದು ಕೆಲ ಬಿಬಿಎಂಪಿ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ.  ಸ್ವತಃ ನಗರ ಯೋಜನೆ ಸ್ಥಾಯಿ ಸಮಿತಿಯ ಸದಸ್ಯರಾಗಿರುವ ಬಿಬಿಎಂಪಿ ಸದಸ್ಯ ಬಾಲಕೃಷ್ಣ ಅವರು ಪಾಲಿಕೆಯ ಈ ದುರಾಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜನರಿಗೆ ಆನ್‍ಲೈನ್‍ನಲ್ಲಿ ನಕ್ಷೆ ಮಂಜೂರಾತಿ ನೀಡಲು ಸಾಧ್ಯವಾಗುತ್ತಿಲ್ಲ. ನಗರ ಯೋಜನೆ ಸ್ಥಾಯಿ ಸಮಿತಿಯಲ್ಲಿ ನೂರಾರು ಕಡತಗಳು ಕೊಳೆಯುತ್ತಿವೆ. ಅಧ್ಯಕ್ಷರು ಕಚೇರಿಗೆ ಬರುವುದನ್ನೇ ನಿಲ್ಲಿಸಿದ್ದಾರೆ. ನಾವು ಪ್ರತಿನಿತ್ಯ ಆಫೀಸ್‍ಗೆ ಬಂದು ಹೋಗುವುದಷ್ಟೆ ಕಾಯಕವಾಗಿದೆ. ಈ ಸಂಪತ್ತಿಗೆ ನಮ್ಮನ್ನು ಸಮಿತಿ ಸದಸ್ಯರನ್ನಾಗಿ ಏಕೆ ನೇಮಿಸಿಕೊಳ್ಳಬೇಕಿತ್ತು ಎಂದು ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಫ್ಟ್’ವೆರ್ ಸರಿಪಡಿಸಲು ಆಗ್ರಹ: ಸಾಫ್ಟ್’ವೆರ್ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿರುವ ನಗರದಲ್ಲೇ ಕೆಟ್ಟು ಹೋಗಿರುವ ಒಂದು ಸಾಫ್ಟ್’ವೆರ್ಅನ್ನು ದುರಸ್ತಿಪಡಿಸಲು ಆರು ತಿಂಗಳಾದರೂ ಸಾಧ್ಯವಾಗದಿರುವುದು ನಾಚಿಕೆಗೇಡಿನ ಸಂಗತಿ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಮೇಯರ್ ಸಂಪತ್‍ರಾಜ್ ಅವರು ಸಾರ್ವಜನಿಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಈ ಕೂಡಲೇ ಕ್ರಮ ವಹಿಸಬೇಕು ಎಂದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಒತ್ತಾಯಿಸಿದ್ದಾರೆ.  ಜನಸೇವೆ ಮಾಡುವ ಉದ್ದೇಶದಿಂದ ಅಸ್ತಿತ್ವಕ್ಕೆ ತರಲಾಗಿರುವ ನಗರ ಯೋಜನೆ ಸ್ಥಾಯಿ ಸಮಿತಿ ಸ್ಥಗಿತಗೊಂಡಿರುವುದು ಆಘಾತಕಾರಿ ವಿಷಯ. ಮೇಯರ್ ಅವರು ಸ್ಥಾಯಿ ಸಮಿತಿಗಳ ಕಾರ್ಯಚಟುವಟಿಕೆಗಳನ್ನು ಹೆಚ್ಚಿಸುವತ್ತ ಗಮನ ಹರಿಸುವುದು ಸೂಕ್ತ ಎಂದು ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

Facebook Comments

Sri Raghav

Admin