ಶಿರೂರು ಶ್ರೀ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಸಾವಿನ ಹಿಂದಿದೆಯೇ ಹೆಣ್ಣಿನ ಕೈವಾಡ..?

ಈ ಸುದ್ದಿಯನ್ನು ಶೇರ್ ಮಾಡಿ

Shirooru-nSwamji-Death

ಬೆಂಗಳೂರು, ಜು.21- ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ನಿಗೂಢ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಬ್ರಹ್ಮಾವರ ಮೂಲದ ಮಹಿಳೆಯೊಬ್ಬರನ್ನು ವಶಕ್ಕೆ ಪಡೆದಿರುವ ತನಿಖಾ ತಂಡದ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಶಿರೂರು ಸ್ವಾಮೀಜಿಯವರ ಸಾವಿನ ಬಗ್ಗೆ ತನಿಖೆ ಆರಂಭಿಸಿರುವ ಪೊಲೀಸರು, ಸ್ವಾಮೀಜಿಯವರಿಗೆ ಫಲಾಹಾರ, ಪ್ರಸಾದ ತಂದುಕೊಡುತ್ತಿದ್ದ ಮಹಿಳೆಯನ್ನು ಇಂದು ಬೆಳಗ್ಗೆ ವಶಕ್ಕೆ ಪಡೆದಿದ್ದಾರೆ.

ಶಿರೂರು ಶ್ರೀಗಳಿಗೆ ಮೊದಲಿನಿಂದಲೂ ಅನಾರೋಗ್ಯವಿತ್ತು. ಮದ್ಯ ಸೇವಿಸುತ್ತಿದ್ದರು, ಹೆಂಗಸರ ಸಹವಾಸವಿತ್ತು, ಹೆಂಗಸರ ಜಗಳವೂ ಸಾವಿಗೆ ಕಾರಣವಿರಬಹುದು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಈ ಬೆನ್ನಲ್ಲೆ ಮಹಿಳೆಯೊಬ್ಬರನ್ನು ತನಿಖಾ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಈ ಮಹಿಳೆ ಶ್ರೀಗಳಿಗೆ ಊಟ, ತಿಂಡಿ ತಂದು ಕೊಡುತ್ತಿದ್ದರು. ತನ್ನ ಕಾರು ಹಾಗೂ ಒಮ್ಮೊಮ್ಮೆ ರಿಕ್ಷಾದಲ್ಲಿ ಆಹಾರವನ್ನು ಕಳುಹಿಸಿಕೊಡುತ್ತಿದ್ದರು ಎನ್ನಲಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಇವರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದಲ್ಲದೆ ಶ್ರೀಗಳ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಏಳು ಮಂದಿಯನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಲಿಂಬರಗಿ ನೇತೃತ್ವದ ತನಿಖಾ ತಂಡಗಳು ವಿಚಾರಣೆ ನಡೆಸುತ್ತಿವೆ.

ಶಿರೂರು ಶ್ರೀಗಳ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಅವರ ಸಹೋದರ ದೂರು ನೀಡಿದ್ದ ಹಿನ್ನೆಲೆಯಲ್ಲಿ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಗಾಗಿ ಏಳು ತಂಡಗಳನ್ನು ರಚಿಸಿದ್ದಾರೆ. ತನಿಖಾ ತಂಡಗಳು ಮಠ, ಮೂಲಮಠ, ಶ್ರೀಗಳು ಚಿಕಿತ್ಸೆ ಪಡೆದ ಆಸ್ಪತ್ರೆ, ಅವರು ಭಾಗವಹಿಸಿದ್ದ ಕಾರ್ಯಕ್ರಮ, ಶ್ರೀಗಳು ತಂಗುತ್ತಿದ್ದ ಕೋಣೆ ಸೇರಿದಂತೆ ಎಲ್ಲಾ ಕಡೆ ಪರಿಶೀಲನೆ ನಡೆಸುತ್ತಿವೆ. ಸಿಸಿಟಿವಿ ಪರಿಶೀಲನೆ, ಶ್ರೀಗಳ ಆಪ್ತರ ವಿಚಾರಣೆ ಹಾಗೂ ದೂರವಾಣಿ ಕರೆಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿವೆ. ಶ್ರೀಗಳ ಅಸಹಜ ಸಾವಿನ ಹಿಂದೆ ಭೂ ಮಾಫಿಯಾ ನಂಟಿದೆ ಎಂಬ ಆರೋಪವೂ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

Facebook Comments

Sri Raghav

Admin