ನೆರೆ ರಾಜ್ಯಗಳಿಗೆ ಹರಿದು ಹೋಗುತ್ತಿದೆ ಹೆಚ್ಚುವರಿ ನೀರು

ಈ ಸುದ್ದಿಯನ್ನು ಶೇರ್ ಮಾಡಿ

Krishna-dam
ಬೆಂಗಳೂರು, ಜು.21- ಕೃಷ್ಣ ಹಾಗೂ ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳು ಜುಲೈ ತಿಂಗಳಿನಲ್ಲೇ ಭರ್ತಿಯಾಗಿದ್ದು, ಹೆಚ್ಚುವರಿ ನೀರು ನೆರೆಯ ರಾಜ್ಯಗಳಿಗೆ ಹರಿದು ಹೋಗುತ್ತಿದೆ. ರಾಜ್ಯದ ಪ್ರಮುಖ 13 ಜಲಾಶಯಗಳಲ್ಲೂ ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿದ್ದು, ಈ ಬಾರಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಉತ್ತಮವಾಗಿದೆ. ಮಲಪ್ರಭ ಜಲಾಶಯವನ್ನು ಹೊರತುಪಡಿಸಿದರೆ ಬಹುತೇಕ ಎಲ್ಲ ಜಲಾಶಯಗಳೂ ಭರ್ತಿಯಾಗಿವೆ. ಕಳೆದ ವರ್ಷ ಶೇ.50ರಷ್ಟು ಕೂಡ ಜಲಾಶಯಗಳಲ್ಲಿ ನೀರು ಸಂಗ್ರಹವಾಗಿರಲಿಲ್ಲ. ಈ ವರ್ಷ 10ಕ್ಕೂ ಹೆಚ್ಚು ಜಲಾಶಯ ಗಳಲ್ಲಿ ಗರಿಷ್ಠ ಪ್ರಮಾಣದ ನೀರು ಸಂಗ್ರಹವಾಗಿದೆ.

ಈಗಾಗಲೇ ಕಾವೇರಿ ಕೊಳ್ಳದ ಹೇಮಾವತಿ, ಹಾರಂಗಿ, ಕಬಿನಿ, ಕೆಆರ್‍ಎಸ್ ಜಲಾಶಯಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿವೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾವೇರಿ ಜಲಾನಯನ ಭಾಗದ ಹಾರಂಗಿ, ಕಬಿನಿ ಹಾಗೂ ಕೆಆರ್‍ಎಸ್ ಜಲಾಶಯಗಳಿಗೆ ಬಾಗಿನ ಕೂಡ ಅರ್ಪಿಸಿದ್ದಾರೆ.
ಕೃಷ್ಣಾ ಕೊಳ್ಳದ ಆಲಮಟ್ಟಿ, ನಾರಾಯಣಪುರ, ತುಂಗಭದ್ರಾ, ಭದ್ರಾ ಜಲಾಶಯಗಳು ಬಹುತೇಕ ಭರ್ತಿ ಯಾಗಿವೆ. ಘಟಪ್ರಭ ಜಲಾಶಯವೂ ಕೂಡ ಭರ್ತಿಯಾಗುವ ಸಾಧ್ಯತೆಗಳಿವೆ. ಆದರೆ, ಮಲಪ್ರಭ ಜಲಾಶಯದಲ್ಲಿ ಕೇವಲ ಶೇ.32ರಷ್ಟು ಮಾತ್ರ ನೀರು ಸಂಗ್ರಹವಾಗಿದೆ.

ಮಲಪ್ರಭ ಜಲಾಶಯದ ಗರಿಷ್ಠ ನೀರಿನ ಸಂಗ್ರಹದ ಪ್ರಮಾಣ 2079.50 ಅಡಿಗಳಾಗಿದ್ದು, ನಿನ್ನೆಯವರೆಗೆ 2056.95 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ 17 ಅಡಿಗಳಷ್ಟು ಹೆಚ್ಚು ನೀರು ಸಂಗ್ರಹವಾಗಿದೆ. ಒಳ ಹರಿವು 9000 ಕ್ಯೂಸೆಕ್‍ಗೂ ಹೆಚ್ಚಿದೆ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಸಂಗ್ರಹದ ಪ್ರಮಾಣ ಈ ಕೆಳಕಂಡಂತಿದೆ. ಪ್ರಮುಖ ಜಲ ವಿದ್ಯುತ್ ಉತ್ಪಾದಿಸುವ ಜಲಾಶಯವಾದ ಲಿಂಗನಮಕ್ಕಿಯಲ್ಲಿ 1799 ಅಡಿಗಳಷ್ಟು ನೀರು ಸಂಗ್ರಹ ವಾಗಿದ್ದು, ಕಳೆದ ವರ್ಷಕ್ಕಿಂತ 28 ಅಡಿಗಳಷ್ಟು ಹೆಚ್ಚು ನೀರು ಸಂಗ್ರಹವಾಗಿದೆ. ಶೇ.61ರಷ್ಟು ನೀರು ಸಂಗ್ರಹವಾಗಿದೆ. ನಿತ್ಯ 25,000ಕ್ಕೂ ಹೆಚ್ಚು ಕ್ಯೂಸೆಕ್ ಒಳಹರಿವಿದೆ. 1819 ಅಡಿ ಗರಿಷ್ಠ ಸಾಮಥ್ರ್ಯವಿರುವ ಈ ಜಲಾಶಯ ಈ ಬಾರಿ ಭರ್ತಿಯಾಗುವ ನಿರೀಕ್ಷೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸೂಪಾ ಜಲಾಶಯದಲ್ಲೂ ಶೇ.59ರಷ್ಟು ನೀರು ಸಂಗ್ರಹವಾಗಿದ್ದು, 18 ಸಾವಿರಕ್ಕೂ ಹೆಚ್ಚು ಒಳಹರಿವಿದೆ. 1849.92 ಅಡಿ ಗರಿಷ್ಠ ಸಾಮಥ್ರ್ಯವಿರುವ ಈ ಜಲಾಶಯದಲ್ಲಿ 1798.75 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ 31 ಅಡಿಗಳಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ಅದೇ ರೀತಿ ವರಾಹಿ ಜಲಾಶಯದಲ್ಲೂ 1921 ಅಡಿಗಳಷ್ಟು ನೀರು ಸಂಗ್ರಹವಾಗಿದ್ದು, ಕಳೆದ ವರ್ಷಕ್ಕಿಂತ 18 ಅಡಿಗಳಷ್ಟು ಹೆಚ್ಚು ನೀರು ಸಂಗ್ರಹವಾಗಿದೆ. 1949.50 ಅಡಿ ಗರಿಷ್ಠ ಸಾಮಥ್ರ್ಯವಿರುವ ಈ ಜಲಾಶಯಕ್ಕೆ 4000ಕ್ಕೂ ಹೆಚ್ಚು ಕ್ಯೂಸೆಕ್ ನೀರಿನ ಒಳಹರಿವಿದೆ.  2158 ಗರಿಷ್ಠ ಸಾಮಥ್ರ್ಯವಿರುವ ಭದ್ರಾ ಜಲಾಶಯದಲ್ಲಿ 2150 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ 46 ಅಡಿಗಳಷ್ಟು ಹೆಚ್ಚು ನೀರು ಸಂಗ್ರಹವಾಗಿದ್ದು, ಶೇ.85ರಷ್ಟು ಜಲಾಶಯದಲ್ಲಿ ನೀರು ಸಂಗ್ರಹವಾಗಿದೆ. 18,500ಕ್ಕೂ ಹೆಚ್ಚು ಸಾವಿರ ಕ್ಯೂಸೆಕ್ ಒಳಹರಿವು ಇದ್ದು, ಸದ್ಯದಲ್ಲೇ ಭರ್ತಿಯಾಗಲಿದೆ.

1633 ಗರಿಷ್ಠ ಸಾಮಥ್ರ್ಯವಿರುವ ತುಂಗಭದ್ರಾ ಜಲಾಶಯ ದಲ್ಲಿ 1631.21 ಅಡಿಗಳಷ್ಟು ನೀರು ಸಂಗ್ರಹವಾಗಿದ್ದು, ಬಹುತೇಕ ಪೂರ್ಣವಾಗಿದೆ. 70 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಜಲಾಶಯದಿಂದ 61 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. 2175 ಅಡಿ ಗರಿಷ್ಠ ಸಾಮಥ್ರ್ಯದ ಘಟಪ್ರಭ ಜಲಾಶಯ ದಲ್ಲಿ 2158.33 ಅಡಿಗಳಷ್ಟು ನೀರು ಸಂಗ್ರಹವಾಗಿದ್ದು, ಇದು ಕೂಡ ಬಹುತೇಕ ಭರ್ತಿಯಾಗುವ ಸಾಧ್ಯತೆಗಳಿವೆ. ಶೇ.74ರಷ್ಟು ನೀರು ಸಂಗ್ರಹವಾಗಿದ್ದು, 21 ಸಾವಿರ ಕ್ಯೂಸೆಕ್‍ಗೂ ಹೆಚ್ಚು ನೀರು ಜಲಾಶಯಕ್ಕೆ ಹರಿದುಬರುತ್ತಿದೆ.  1704.81 ಅಡಿ ಸಾಮಥ್ರ್ಯದ ಆಲಮಟ್ಟಿ ಜಲಾಶಯ ಶೇ.88ರಷ್ಟು ಭರ್ತಿಯಾಗಿದೆ. 1,71,000 ಕ್ಯೂಸೆಕ್‍ಗೂ ಹೆಚ್ಚು ಒಳಹರಿವಿದ್ದು, 1,73,000 ಕ್ಯೂಸೆಕ್‍ಗೂ ಹೆಚ್ಚು ನೀರನ್ನು ನದಿಗೆ ಬಿಡಲಾಗಿದೆ.

ಅದೇ ರೀತಿ ನಾರಾಯಣಪುರ ಜಲಾಶಯವು ಬಹುತೇಕ ಭರ್ತಿಯಾಗಿದ್ದು, 1,78,000 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಿಂದ ಲಕ್ಷಾಂತರ ಕ್ಯೂಸೆಕ್ ನೀರು ನೆರೆಯ ಆಂಧ್ರ ಪ್ರದೇಶಕ್ಕೆ ಹರಿದು ಹೋಗುತ್ತಿದೆ.  ಕಾವೇರಿ ಕೊಳ್ಳದ ಕಬಿನಿ ಹಾಗೂ ಕೆಆರ್‍ಎಸ್ ಜಲಾಶಯ ದಿಂದ ತಲಾ 36,000ಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದ್ದು, ತಮಿಳುನಾಡಿಗೆ ನಿತ್ಯ 70,000 ಕ್ಯೂಸೆಕ್‍ಗೂ ಹೆಚ್ಚು ನೀರು ನದಿಗೆ ಹರಿದುಹೋಗುತ್ತಿದೆ. ಈಗಾಗಲೇ ತಮಿಳುನಾಡಿಗೆ ಸುಮಾರು 70 ಟಿಎಂಸಿ ಅಡಿಗೂ ಹೆಚ್ಚು ನೀರನ್ನು ಬಿಡಲಾಗಿದೆ. ಜುಲೈ ಅಂತ್ಯದ ವೇಳೆಗೆ ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪಿನ ಪ್ರಕಾರ ಸುಮಾರು 40 ಟಿಎಂಸಿ ಅಡಿ ನೀರನ್ನು ಬಿಡಬೇಕಾಗಿತ್ತು ಎಂದು ಉನ್ನತ ಮೂಲಗಳು ತಿಳಿಸಿವೆ.

Facebook Comments

Sri Raghav

Admin