ಬಸ್‍ಗೆ ಡಿಕ್ಕಿ ಹೊಡೆದು ಹೊತ್ತಿಉರಿದ ಕಾರು, ಇಬ್ಬರ ಸಜೀವ ದಹನ

ಈ ಸುದ್ದಿಯನ್ನು ಶೇರ್ ಮಾಡಿ

Car-Fire--01

ಬೆಂಗಳೂರು, ಜು.22- ಹೊಸೂರು ಮುಖ್ಯ ರಸ್ತೆಯ ಚಂದಾಪುರದಲ್ಲಿಂದು ಬೆಳ್ಳಂಬೆಳಗ್ಗೆ ಬಸ್‍ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿಗೆ ಇಬ್ಬರು ಸಜೀವ ದಹನಗೊಂಡ ದಾರುಣ ಘಟನೆ ನಡೆದಿದೆ. ಹೊಸೂರು ಮುಖ್ಯರಸ್ತೆಯ ಹೆಣ್ಮಾಗರ ಗೇಟ್ ಬಳಿ ಈ ಘಟನೆ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿದ ಕಾರು, ಮೊದಲು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಬಳಿಕ ಬಸ್‍ಗೆ ಡಿಕ್ಕಿಹೊಡೆದಿದೆ. ತಕ್ಷಣ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದರಲ್ಲಿದ್ದ ಇಬ್ಬರು ಸಜೀವದಹನಗೊಂಡಿದ್ದಾರೆ.

ಬೆಂಕಿಯ ಕೆನ್ನಾಲಿಗೆ ಕ್ಷಣಾರ್ಧದಲ್ಲಿ ಹಬ್ಬಿದ್ದರಿಂದ ಕಾರು ಮತ್ತು ಬಸ್ ಸಂಪೂರ್ಣ ಬೆಂಕಿಗಾಹುತಿಯಾಗಿವೆ. ಬಸ್‍ನಲ್ಲಿ 20ಕ್ಕೂ ಅಧಿಕ ಪ್ರಯಾಣಿಕರು ಇದ್ದರು. ಅಪಘಾತ ಸಂಭವಿಸಿದ ತಕ್ಷಣ ಅವರು ಬಸ್‍ನಿಂದ ಹೊರಬಂದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರು ಬೆಂಗಳೂರು ಕಡೆಯಿಂದ ಹೊಸೂರು ಕಡೆಗೆ ಹೋಗುತ್ತಿತ್ತು ಎಂದು ತಿಳಿದುಬಂದಿದೆ.

ಕಾರು ಸಂಪೂರ್ಣ ಭಸ್ಮವಾದುದರಿಂದ ಅವರ ನೋಂದಣಿ ಸಂಖ್ಯೆ ಹಾಗೂ ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪ್ರಕರಣ ದಾಖಲಿಸಿಕೊಂಡಿರುವ ಸೂರ್ಯನಗರ ಪೊಲೀಸರು ತಿಳಿಸಿದ್ದಾರೆ.  ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಷ್ಟರದಲ್ಲಿ ಎರಡೂ ವಾಹನಗಳು ಸಂಪೂರ್ಣ ಸುಟ್ಟುಹೋಗಿವೆ. ಬಸ್ ಗ್ರೀನ್‍ಲೈನ್ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ್ದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Facebook Comments

Sri Raghav

Admin