‘ಉಚಿತ ಬಸ್‌ ಪಾಸ್‌ ಕೊಡ್ತೀವಿ ಅಂತಾ ನಾವು ಹೇಳಿಲ್ಲ, ಎಲ್ಲದಕ್ಕೂ ಸಬ್ಸಿಡಿ ಕೊಡಿ ಅಂದ್ರೆ ಹೇಗೆ..?”

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--01'

ಬೆಂಗಳೂರು. ಜು. 22 : ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಸೌಲಭ್ಯ ಸಿಗುವ ಸಾಧ್ಯತೆ ಇಲ್ಲ ಎಂಬುದು ಬಹುತೇಕ ಖಚಿತವಾಗಿದೆ. ಮಿತ್ರ ಪಕ್ಷ ಕಾಂಗ್ರೆಸ್‌ ಆಗ್ರಹ, ವಿದ್ಯಾರ್ಥಿ ಸಂಘಟನೆಗಳ ಹೋರಾಟದ ಮಧ್ಯೆಯೂ ಈ ಬೇಡಿಕೆಯನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಳ್ಳಿಹಾಕಿದ್ದಾರೆ. ಜೆಡಿಎಸ್‌ ಕಚೇರಿಯಲ್ಲಿ ಪಕ್ಷದ ಮುಖಂಡರ ಸಭೆ ಬಳಿಕ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡುವುದಾಗಿ ನಾವಂತೂ ಚುನಾವಣಾ ಪೂರ್ವದಲ್ಲಿ ಯಾವುದೇ ಭರವಸೆ ನೀಡಿಲ್ಲ. ಎಲ್ಲದಕ್ಕೂ ಸಬ್ಸಿಡಿ ಕೊಡಿ ಎಂದರೆ ಹೇಗೆ ಸಾಧ್ಯ,” ಎಂದು ಪ್ರಶ್ನಿಸಿದರು. ಈ ಮೂಲಕ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಅಸಾಧ್ಯ ಎನ್ನುವ ಮೂಲಕ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುವುದಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.

ಇದಕ್ಕೆ ಮುನ್ನ ಪಕ್ಷದ ಮುಖಂಡರ ಸಭೆಯಲ್ಲಿ ಕೆಲವು ಶಾಸಕರು ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡುವುದು ಸೂಕ್ತ. ಈ ಬೇಡಿಕೆಗೆ ಸ್ಪಂದಿಸದಿದ್ದರೆ ಸಾರ್ವಜನಿಕವಾಗಿ ಪಕ್ಷ ಮತ್ತು ಸರಕಾರದ ಬಗ್ಗೆ ತಪ್ಪು ಸಂದೇಶ ರವಾನೆಯಾಗಲಿದೆ ಎಂದು ಸಿಎಂಗೆ ಕಿವಿಮಾತು ಹೇಳಿದರು. ಆದರೆ, ಈ ಆಗ್ರಹವನ್ನು ಒಪ್ಪದ ಸಿಎಂ ”ಹಿಂದಿನ ಯಾವ ಸರಕಾರವೂ ಸಂಪೂರ್ಣ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡಿಲ್ಲ. ಸಿದ್ದರಾಮಯ್ಯ ಅವರು ಕೇವಲ ಘೋಷಣೆ ಮಾಡಿ ಹೋಗಿದ್ದಾರೆ. ರೈತರ ಸಾಲ ಮನ್ನಾ ತೀರ್ಮಾನ ಮತ್ತಿತರ ಹೊಣೆಗಾರಿಕೆ ನಿಭಾಯಿಸುವುದೇ ಕಷ್ಟವಾಗಿರುವಾಗ ಹೊಸ ಕಮಿಟ್‌ಮೆಂಟ್‌ಗೆ ಸರಕಾರ ಸಿದ್ಧವಿಲ್ಲ. ಜತೆಗೆ, ಇಂತಹ ತೀರ್ಮಾನ ಮಾಡಿದರೆ ವಾರ್ಷಿಕ 2 ಸಾವಿರ ಕೋಟಿ ರೂ.ಗೂ ಅಧಿಕ ಆರ್ಥಿಕ ಹೊರೆ ಬೀಳಲಿದೆ. ಇಷ್ಟೊಂದು ಹೊರೆಯನ್ನು ಭರಿಸುವ ಸಾಮರ್ಥ್ಯ‌ ಸದ್ಯಕ್ಕೆ ಸರಕಾರಕ್ಕಿಲ್ಲ ” ಎಂದು ಸಭೆಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಹಿಂದಿನ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳಿಗೆ ಉಚಿತ ಬಸ್‌ಪಾಸ್‌ ಸೌಲಭ್ಯ ಕಲ್ಪಿಸಲಾಗಿತ್ತು. ಈ ಉದ್ದೇಶಕ್ಕೆ ಪರಿಶಿಷ್ಟರ ಉಪಯೋಜನೆ (ಎಸ್‌ಇಪಿ/ಟಿಎಸ್‌ಪಿ) ಅನುದಾನವನ್ನು ಬಳಕೆ ಮಾಡಲಾಗುತ್ತಿತ್ತು. ಆದರೆ, ವಿದ್ಯಾರ್ಥಿಗಳಲ್ಲೇ ಜಾತಿ ಆಧಾರದ ಮೇಲೆ ತಾರತಮ್ಯ ಮಾಡುವುದು ಸರಿಯಲ್ಲ ಎಂಬ ಆಕ್ಷೇಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು. ಜತೆಗೆ, ಚುನಾವಣೆಯೂ ಸಮೀಪಿಸಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಕಳೆದ ಫೆಬ್ರವರಿಯಲ್ಲಿ ಬಜೆಟ್‌ ಭಾಷಣದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ಸೌಲಭ್ಯ ವಿಸ್ತರಣೆಯ ತೀರ್ಮಾನ ಪ್ರಕಟಿಸಿದ್ದರು. ಈ ಉದ್ದೇಶದಂತೆ ಅಂದಾಜು 19.60 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡಲು ವಾರ್ಷಿಕ 2 ಸಾವಿರ ಕೋಟಿ ರೂ. ವೆಚ್ಚವನ್ನು ಅಂದಾಜು ಮಾಡಲಾಗಿತ್ತು.
ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಕೊಡುವುದಿಲ್ಲವೆಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ‘ಅದು ನನಗೆ ಗೊತ್ತಿಲ್ಲ’ ಎಂದಷ್ಟೇ ಹೇಳಿದ್ದಾರೆ.

Facebook Comments

Sri Raghav

Admin