ಕಾಂಗ್ರೆಸ್ ಅಧ್ಯಕ್ಷರಾದ ನಂತರ ಸಿಡಬ್ಲ್ಯುಸಿ ಪ್ರಥಮ ಸಭೆಯಲ್ಲಿ ರಾಹುಲ್ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

CWC-Meet
ನವದೆಹಲಿ, ಜು.22- ಹೊಸದಾಗಿ ರಚನೆಯಾಗಿರುವ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ (ಸಿಡಬ್ಲ್ಯುಸಿ) ಭೂತ, ವರ್ತಮಾನ ಮತ್ತು ಭವಿಷ್ಯಕ್ಕೆ ಸದೃಢ ಸಂಪರ್ಕ ಸೇತುವೆಯಾಗಿದೆ ಎಂದು ಬಣ್ಣಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ದಮನಕ್ಕೆ ಮತ್ತು ತುಳಿತಕ್ಕೆ ಒಳಗಾದವರ ರಕ್ಷಣೆಗೆ ಹೋರಾಡುವಂತೆ ಪಕ್ಷದ ಮುಖಂಡರಿಗೆ ಕರೆ ನೀಡಿದ್ದಾರೆ. ತಾವು ಕಾಂಗ್ರೆಸ್ ಅಧ್ಯಕ್ಷರಾದ ನಂತರ ನೂತನವಾಗಿ ರಚನೆಯಾದ ಸಿಡಬ್ಲ್ಯುಸಿನ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೊಸ ಸಿಡಬ್ಲ್ಯುಸಿ ಅಸ್ತಿತ್ವಕ್ಕೆ ಬಂದಿರುವುದರಿಂದ ಪಕ್ಷದ ಪುನಶ್ಚೇತಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್‍ನನ್ನು ಬಲಗೊಳಿಸುತ್ತೇವೆ ಎಂದು ಅವರು ಹೇಳಿದರು.  ಸಭೆಯಲ್ಲಿ ಮಾತನಾಡಿದ ಯುಪಿಎ ಅಧ್ಯಕ್ಷ ಸೋನಿಯಾಗಾಂಧಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದ ಪ್ರಜಾಪ್ರಭುತ್ವದೊಂದಿಗೆ ಚೆಲ್ಲಾಟವಾಡುತ್ತಿರುವ ಕೇಂದ್ರ ಸರ್ಕಾರದ ಅಪಾಯಕಾರಿ ಆಡಳಿತದಿಂದ ನಾವು ಜನರನ್ನು ರಕ್ಷಿಸುವ ಅಗತ್ಯವಿದೆ ಎಂದು ಹೇಳಿದರು.
ದೇಶದ ಬಡವರು, ತುಳಿತಕ್ಕೆ ಒಳಗಾದವರು ಮತ್ತು ಸೌಲಭ್ಯ ವಂಚಿತರಲ್ಲಿ ಈಗ ಆತಂಕದ ವಾತಾವರಣ ಮನೆ ಮಾಡಿದೆ ಎಂದು ಸೋನಿಯಾ ವಿಷಾದಿಸಿದರು.

ಸರ್ಕಾರದ ವೈಫಲ್ಯಗಳನ್ನು ಮರೆ ಮಾಚಲು ಪ್ರಧಾನಿ ಮೋದಿ ಅವರು ತಮ್ಮ ವಾಕ್ಚಾತುರ್ಯ ಪ್ರದರ್ಶಿಸುತ್ತಿದ್ದಾರೆ. ಇದು ಅವರ ಹತಾಶೆಯ ಪ್ರತಿರೂಪ. ಕೇಂದ್ರ ಸರ್ಕಾರದ ಹಿನ್ನಡೆಯ ದಿನಗಣನೆ ಆರಂಭವಾಗಿದೆ ಎಂದು ಯುಪಿಎ ಅಧ್ಯಕ್ಷರು ಭವಿಷ್ಯ ನುಡಿದರು. ಮುಂಬರುವ ಚುನಾವಣೆಗಳಲ್ಲಿ ಸಮಾನಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಈ ಕಾರ್ಯಕ್ಕೆ ನಾವು ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಅವರು ಹೇಳಿದರು.  ಡಾ.ಸಿಂಗ್ ವಾಗ್ದಾಳಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ರೈತರ ಆದಾಯ ಇಮ್ಮಡಿಗೊಳಿಸಲು ಕೇಂದ್ರಕ್ಕೆ ಸಾಧ್ಯವಾಗುವುದಿಲ್ಲ ಎಂದು ಟೀಕಿಸಿದರು.

ರಾಜಧಾನಿ ನವದೆಹಲಿಯಲ್ಲಿ ಇಂದು ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಮಾತನಾಡಿದ ಅವರ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ವಿವರಿಸಿದರು. 2022ರ ವೇಳೆ ದೇಶದ ರೈತರ ಆದಾಯ ಇಮ್ಮಡಿಗೊಳಿಸುವುದಾಗಿ ಮೋದಿ ಸರ್ಕಾರ ಹೇಳುತ್ತಿದೆ. ಇದು ಸಾಧ್ಯವಾಗಬೇಕಾದರೆ ಕೃಷಿ ಆದಾಯದಲ್ಲಿ ಶೇ.14ರಷ್ಟು ಪ್ರಗತಿಯಾಗಬೇಕು. ಇದು ಎಲ್ಲ ಕಂಡು ಬರುತ್ತಿಲ್ಲ. ಹೀಗಾಗಿ ಇನ್ನು ನಾಲ್ಕು ವರ್ಷಗಳಲ್ಲಿ ಇದು ಖಂಡಿತಾ ಸಾಧ್ಯವಾಗದು ಎಂದು ಅವರು ಅಂಕಿ-ಅಂಶ ಸಹಿತ ತಿಳಿಸಿದರು.   ಕೇಂದ್ರ ಸರ್ಕಾರವು ಸ್ವಯಂ ಹೊಗಳಿಕೆಯ ತಂತ್ರ ಅನುಸರಿಸುತ್ತಿದೆ.

ಪಕ್ಷ ಬಲವರ್ಧನೆಗಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅನುಸರಿಸುತ್ತಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ಸೂಚಿಸಿದ ಮಾಜಿ ಪ್ರಧಾನಿ, ದೇಶದ ಸೌಹಾರ್ದತೆ, ಸಮಗ್ರತೆ ಹಾಗೂ ಆರ್ಥಿಕ ಪ್ರಗತಿ ಮರುಸ್ಥಾಪನೆಗಾಗಿ ರಾಹುಲ್ ಅವರ ದೊಡ್ಡ ಜವಾಬ್ದಾರಿಗೆ ನಾವೆಲ್ಲರೂ ಬೆಂಬಲ ಸೂಚಿಸುತ್ತೇವೆ ಎಂದು ಘೋಷಿಸಿದರು.

Facebook Comments

Sri Raghav

Admin