‘ಲೈಂಗಿಕ ಸಂಗಾತಿ ಆಯ್ಕೆ ಆಯಾ ವ್ಯಕ್ತಿಯ ವೈಯಕ್ತಿಕ ವಿಷಯ’

ಈ ಸುದ್ದಿಯನ್ನು ಶೇರ್ ಮಾಡಿ

Ravi-shankar-Prasad

ನವದೆಹಲಿ, ಜು.22-ಲೈಂಗಿಕ ಸಂಗಾತಿ ಅಥವಾ ಪಾಲುದಾರರ ಆಯ್ಕೆಯ ಆಯಾ ವ್ಯಕ್ತಿಗಳ ವೈಯಕ್ತಿಕ ವಿಷಯ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ದೇಶದಲ್ಲಿ ಸಲಿಂಗ ಕಾಮವನ್ನು ಕಾನೂನುಬಾಹಿರ ಎಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆ(ಐಪಿಸಿ)ಯ ಸೆಕ್ಷನ್ 377 ಅನ್ನು ರದ್ದು ಮಾಡುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ವಿರೋಧಿಸುವುದಿಲ್ಲ ಎಂಬ ನಿಲುವು ಪ್ರಕಟಿಸಿದ ಬಳಿಕ ಕಾನೂನು ಸಚಿವರ ಮೊದಲ ಘೋಷಣೆ ಇದಾಗಿದೆ.

ವಿಶೇಷ ಸಂದರ್ಶನವೊಂದರಲ್ಲಿ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡ ಸಚಿವರು, ಬದಲಾಗುತ್ತಿರುವ ಸನ್ನಿವೇಶದಲ್ಲಿ ಪರಿವರ್ತಿನೆಯಾಗುತ್ತಿರುವ ಸಾಮಾಜಿಕ ಪ್ರವೃತ್ತಿಯನ್ನು ಗೌರವಿಸುವ ದೃಷ್ಟಿಯಿಂದ ಸರ್ಕಾರ ಈ ಧೋರಣೆ ಕೈಗೊಂಡಿದೆ ಎಂದರು. ತ್ರಿವಳಿ ತಲಾಖ್ ನಿಷೇಧ ಮಸೂದೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಾನೂನು ಸಚಿವರು, ಮುಸ್ಲಿಮ್ ಮಹಿಳೆಯರ ಹಕ್ಕುಗಳನ್ನು ಗೌರವಿಸುವ ಕ್ರಮ ಇದಾಗಿದೆ. ತ್ರಿವಳಿ ತಲಾಖ್ ಒಂದು ಅಪರಾಧ ಕೃತ್ಯವೆಂದು ಪರಿಗಣಿಸುವ ಮೂಲಕ ಸಹಸ್ರಾರು ಮುಸ್ಲಿಮ್ ಮಹಿಳೆಯರಿಗೆ ನ್ಯಾಯ ಒದಗಿಸುವ ಬದ್ಧತೆ ನಮ್ಮದು ಎಂದು ಹೇಳಿದರು.

ಗುಂಪಿನ ಹತ್ಯೆ ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ನೀಡಿರುವ ಸಲಹೆ ಮತ್ತು ಸೂಚನೆಗಳನ್ನು ಕೇಂದ್ರ ಸರ್ಕಾರ ಕಾರ್ಯಗತಗೊಳಿಸಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರವಿಶಂಕರ್ ಪ್ರಸಾದ್, ಇಂಥ ಹತ್ಯೆ ಪ್ರಕರಣಗಳನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಈ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ಆದೇಶ ಮತ್ತು ಸಲಹೆಗಳನ್ನು ನಾವು ಗಂಭೀರವಾಗಿ ಪರಿಶೀಲಿಸುತ್ತಿದ್ದೇವೆ ಎಂದರು.

ಇಂಥ ಹತ್ಯೆ ಪ್ರಕರಣಗಳ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಕಾನೂನಿನಲ್ಲಿ ಸಾಕಷ್ಟು ಅವಕಾಶಗಳಿವೆ. ಈ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ಹೊಸ ಆದೇಶಗಳನ್ನು ನಾವು ಗಂಭೀರವಾಗಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.

Facebook Comments

Sri Raghav

Admin