2019ರಲ್ಲಿ ಅಧಿಕಾರಕ್ಕೇರಲು ಸಿಡಬ್ಲ್ಯೂಸಿ ಸಭೆಯಲ್ಲಿ ರಣತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

CWC--01

ನವದೆಹಲಿ, ಜು.22- ನವದೆಹಲಿಯಲ್ಲಿಂದು ನಡೆದ ಅಖಿಲ ಭಾರತ ಕಾಂಗ್ರೆಸ್ ಕಾರ್ಯಕಾರಿಣಿಯ ಮಹತ್ವದ ಸಭೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆಯ ಸಮರಕ್ಕೆ ಸಜ್ಜಾಗಲು ಬೇಕಾದ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಾಗಿದೆ. ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಿ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಸಾಧಿಸಿ ರಾಷ್ಟ್ರ ರಾಷ್ಟ್ರರಾಜಕಾರಣದ ಗದ್ದುಗೆಗೇರುವ ಕಾರ್ಯತಂತ್ರವನ್ನು ರೂಪಿಸುವ ಹಲವು ಮಹತ್ವದ ಚರ್ಚೆಗಳನ್ನು ಎಐಸಿಸಿ ಅಧ್ಯಕ್ಷರಾದ ರಾಹುಲ್‍ಗಾಂಧಿಯವರ ನೇತೃತ್ವದಲ್ಲಿ ನಡೆಸಲಾಗಿದೆ.

ಎಐಸಿಸಿ ಕಾರ್ಯಕಾರಿಣಿಯನ್ನು ಪುನರ್ ರಚನೆ ಮಾಡಿದ ನಂತರ ನಡೆಯುತ್ತಿರುವ ಮೊದಲ ಸಭೆಯಲ್ಲಿ ಕಾಂಗ್ರೆಸ್ ವರಿಷ್ಠರಾದ ಸೋನಿಯಾಗಾಂಧಿ, ಮನ್‍ಮೋಹನ್‍ಸಿಂಗ್, ಎ.ಕೆ.ಅಂಟೋನಿ, ಅಹಮ್ಮದ್ ಪಾಟೀಲ್, ಮಲ್ಲಿಕಾರ್ಜುನಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡು ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಚರ್ಚಿಸಿದ್ದಾರೆ.

ರಾಹುಲ್‍ಗಾಂಧಿಯವರು ಎಐಸಿಸಿ ಅಧ್ಯಕ್ಷರಾದ ನಂತರ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆ ಸವಾಲಾಗಿತ್ತು. ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದ್ದರೂ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಸಾಧಿಸಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವಲ್ಲಿ ಸಫಲವಾಗಿದೆ. ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸುವುದು ಮುಂದಾಗಿರುವ ಸಂದರ್ಭದಲ್ಲಿ, ಹಲವೆಡೆ ಕಾಂಗ್ರೆಸ್‍ಗೆ ತೊಂದರೆಯಾಗುವ ಸಾಧ್ಯತೆ ಇದೆ. ಯಾವ ಯಾವ ಕಡೆ ಕಾಂಗ್ರೆಸ್ ಬಲಿಷ್ಠವಾಗಿದೆಯೇ ಅಲ್ಲೇ ಜೆಡಿಎಸ್ ಸ್ಥಾನದ ಬೇಡಿಕೆ ಇಟ್ಟಿದೆ. ಈ ಎಲ್ಲದರ ನಡುವೆ ಕಾಂಗ್ರೆಸ್‍ಗೆ ಹೊಂದಾಣಿಕೆ ಅನಿವಾರ್ಯವಾಗಿದೆ.

ಅದೇ ರೀತಿ ಮಧ್ಯಪ್ರದೇಶ, ಮಹಾರಾಷ್ಟ್ರ, ಕೇರಳ, ಕರ್ನಾಟಕ, ಉತ್ತರ ಪ್ರದೇಶ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ.ಉತ್ತರ ಪ್ರದೇಶದಲ್ಲಿ ಎಸ್‍ಪಿ, ಬಿಎಸ್‍ಪಿಯೊಂದಿಗೆ ಮೈತ್ರಿ ಸಾಧಿಸಬೇಕಾಗಿದೆ. ಮಹಾರಾಷ್ಟ್ರದಲ್ಲಿ ಎನ್‍ಸಿಪಿಯೊಂದಿಗೆ ಕೇರಳದಲ್ಲಿ ಪ್ರಾದೇಶಿಕ ಪಕ್ಷಗಳೊಂದಿಗೆ ಈ ರೀತಿ ಬಹುತೇಕ ರಾಜ್ಯಗಳಲ್ಲಿ ಮೈತ್ರಿ ಮಾಡಿಕೊಂಡು ಚುನಾವಣಾ ಕಣಕ್ಕಿಳಿದು ಯುಪಿಎ ಅಧಿಕಾರಕ್ಕೆ ತರುವ ಕಾರ್ಯತಂತ್ರವನ್ನು ಹೆಣೆದಿದೆ.

ರಾಷ್ಟ್ರ ರಾಜಕಾರಣದ ದಿಕ್ಕನ್ನು ಬದಲಿಸುವ ವೇದಿಕೆಯಾಗಿ ಕರ್ನಾಟಕ ಈಗಾಗಲೇ ಹೊರಹೊಮ್ಮಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಸಂದರ್ಭದಲ್ಲಿ ಎಲ್ಲಾ ಪ್ರಾದೇಶಿಕ ಪಕ್ಷಗಳ ಮುಖಂಡರು ಒಂದೇ ವೇದಿಕೆಗೆ ಬಂದು ತಮ್ಮ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ಕಾರ್ಯಕಾರಿಣಿಯಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ನೀತಿ ನಿರೂಪಣೆಯನ್ನು ರೂಪಿಸುವ ಉನ್ನತ ಸಮಿತಿಯಾದ ಕಾರ್ಯಕಾರಿಣಿಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೂಡ ಕೈಗೊಳ್ಳುವ ಸಾಧ್ಯತೆ ಇದೆ. ಒಟ್ಟಾರೆ ದೇಶಾದ್ಯಂತ ನೆಲಕಚ್ಚಿರುವ ಕಾಂಗ್ರೆಸ್ ಪಕ್ಷವನ್ನು ಪುನಶ್ಚೇತನಗೊಳಿಸಬೇಕು. ಪ್ರಾದೇಶಿಕ ಪಕ್ಷಗಳೊಂದಿಗೆ ಅನಿವಾರ್ಯವಾಗಿ ಹೊಂದಾಣಿಕೆ ಮಾಡಿಕೊಂಡು ಮುನ್ನಡೆಯಬೇಕಾಗಿದೆ. ಈ ಸಂದರ್ಭದಲ್ಲಿ ಕೆಲವೊಂದು ವಿಷಯಗಳಲ್ಲಿ ಪಕ್ಷ ತ್ಯಾಗ ಮಾಡಲು ಸಿದ್ಧವಾಗಿರಬೇಕು ಎಂಬ ಮಾತುಗಳು ಕೂಡ ಸಭೆಯಲ್ಲಿ ಕೇಳಿಬಂದಿವೆ ಎನ್ನಲಾಗಿದೆ.

ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಮನವರಿಕೆ ಮಾಡಿಕೊಡುವುದು, ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿಸುವುದು, ಪಕ್ಷವನ್ನು ಸದೃಢಗೊಳಿಸುವುದು, ಈ ಮೂಲಕ ಕೇಂದ್ರದ ಅಧಿಕಾರವನ್ನು ಹಿಡಿಯುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುವ ಬಗ್ಗೆ ಇಂದಿನ ಕಾರ್ಯಕಾರಿಣಿಯಲ್ಲಿ ಮಹತ್ವದ ಚರ್ಚೆ ನಡೆದಿದೆ.
ಅವಿಶ್ವಾಸ ಗೊತ್ತುವಳಿ ಸಂದರ್ಭದಲ್ಲಿ ವಿಪಕ್ಷಗಳಿಗೆ ಸೋಲಾದರೂ ವಿಪಕ್ಷಗಳ ಒಗ್ಗಟ್ಟು ಪ್ರದರ್ಶನವಾಗಿದೆ. ಪ್ರಧಾನಿ ಮೋದಿ ಹಾಗೂ ಅವರ ವೈಫಲ್ಯಗಳನ್ನು ಹೇಳಲು ಅವಿಶ್ವಾಸ ಗೊತ್ತುವಳಿ ಸಂದರ್ಭವನ್ನು ವಿಪಕ್ಷಗಳು ಸರಿಯಾಗಿ ಬಳಸಿಕೊಂಡವು. ಈ ಒಗ್ಗಟ್ಟನ್ನು ಮುಂದಿನ ದಿನಗಳಲ್ಲಿಯೂ ಕಾಯ್ದುಕೊಂಡು ಬಿಜೆಪಿಯನ್ನು ಸೋಲಿಸಬೇಕು. ಇದಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷ ಬೆಂಬಲ ನೀಡಲು ಪಕ್ಷ ಸಿದ್ಧವಾಗಿರಬೇಕು ಎಂಬ ವಿಷಯದ ಕುರಿತೂ ಸಭೆಯಲ್ಲಿ ಚರ್ಚೆ ನಡೆದಿದೆ. ಕರ್ನಾಟಕದಿಂದ ವಿಶೇಷ ಆಹ್ವಾನಿತರಾದ ಕೆ.ಎಚ್. ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಎಐಸಿಸಿ ಕಾರ್ಯದರ್ಶಿಗಳು, ಎಲ್ಲಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಮತ್ತಿತರರು ಪಾಲ್ಗೊಂಡಿದ್ದರು.

Facebook Comments

Sri Raghav

Admin