ಮೂವರು ಉಗ್ರರ ಎನ್‍ಕೌಂಟರ್, ಅಪಹರಣಕ್ಕೊಳಗಾಗಿದ್ದ ಕಾನ್ಸ್ಟೆಬಲ್ ಮೃತದೇಹ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Police-01
ಶ್ರೀನಗರ, ಜು.22- ಕಾಶ್ಮೀರ ಕಣಿವೆಯಲ್ಲಿ ಒಂದೆಡೆ ಭಯೋತ್ಪಾದಕರ ಹಾವಳಿ ಮುಂದುವರಿದಿದ್ದರೆ, ಮತ್ತೊಂದೆಡೆ ಉಗ್ರರ ನಿಗ್ರಹ ಕಾರ್ಯಾಚರಣೆಯೂ ಬಿರುಸಾಗಿದೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರಗಾಮಿಗಳು ಹತರಾಗಿದ್ದಾರೆ.

ಈ ಮಧ್ಯೆ, ಉಗ್ರಗಾಮಿಗಳು ಅಪಹರಿಸಿದ್ದ ಪೊಲೀಸ್ ಕಾನ್ಸ್ಟೆಬಲ್  ಸಲೀಂ ಶಾ ಮೃತದೇಹ ಕುಲ್ಗಾಂ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಕುಲ್ಗಾಂ ಜಿಲ್ಲೆಯ ಖುದ್ವನಿ ಪ್ರದೇಶದ ವನಿ ಮೊಹಲ್ಲಾದಲ್ಲಿ ಪಾಕಿಸ್ತಾನಿ ಬೆಂಬಲಿತ ಉಗ್ರಗಾಮಿಗಳು ಇರುವ ಬಗ್ಗೆ ಲಭಿಸಿದ ಖಚಿತ ಸುಳಿವಿನ ಮೇರೆಗೆ ಭದ್ರತಾ ಪಡೆಗಳು ಆ ಪ್ರದೇಶವನ್ನು ಸುತ್ತುವರಿದರು. ಈ ಸಂದರ್ಭದಲ್ಲಿ ಯೋಧರು ಮತ್ತು ಉಗ್ರರ ನಡುವೆ ಭೀಕರ ಗುಂಡಿನ ಚಕಮಕಿ ನಡೆಯಿತು.

ಎನ್‍ಕೌಂಟರ್‍ನಲ್ಲಿ ಮೂವರು ಉಗ್ರರು ಹತರಾದರು. ಮೃತ ಭಯೋತ್ಪಾದಕರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.  ಇವರು ಅಪಹೃತ ಪೊಲೀಸ್ ಪೇದೆ ಸಲೀಂ ಶಾ ಹಂತಕರೆಂದು ಶಂಕಿಸಲಾಗಿದೆ. ಗುಂಡಿನ ಚಕಮಕಿ ವೇಳೆ ಪರಾರಿಯಾಗಿರಬಹುದಾದ ಇತರೆ ಉಗ್ರರಿಗಾಗಿ ಆ ಪ್ರದೇಶದಲ್ಲಿ ತೀವ್ರ ಶೋಧ ನಡೆಯುತ್ತಿದೆ.   ಪೇದೆ ಅಪಹರಣ, ಹತ್ಯೆ : ಭಯೋತ್ಪಾದಕರು ಅಪಹರಿಸಿದ್ದ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಪೇದೆ ಸಲೀಂ ಶಾ ಮೃತದೇಹ ಕುಲ್ಗಾಮ್ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಜೆಯಲ್ಲಿದ್ದ ಸಲೀಂ ಅವರನ್ನು ಶುಕ್ರವಾರ ರಾತ್ರಿ ಕುಲ್ಗಾಂ ಜಿಲ್ಲೆಯ ಮುತಲಮಾ ಪ್ರದೇಶದ ಅವರ ಮನೆಯಿಂದ ಉಗ್ರರು ಅಪಹರಿಸಿದ್ದರು. ಅವರನ್ನು ಪತ್ತೆ ಮಾಡುವ ಕಾರ್ಯಾಚರಣೆ ವೇಳೆ ನಿನ್ನೆ ರಾತ್ರಿ ಅವರ ಮೃತದೇಹ ಕಂಡುಬಂದಿದ್ದು, ಅವರನ್ನು ಹಿಂಸಿಸಿ ಕೊಲ್ಲಲಾಗಿದೆ. ಅವರ ಮೃತದೇಹ ಪತ್ತೆಯಾದ ನಂತರ ಈ ಪ್ರದೇಶದಲ್ಲಿ ಯೋಧರು ಉಗ್ರಗಾಮಿಗಳಿಗಾಗಿ ತೀವ್ರ ಶೋಧ ಮುಂದುವರಿಸಿದ್ದರು.

Facebook Comments

Sri Raghav

Admin