3ನೇ ದಿನಕ್ಕೆ ಕಾಲಿಟ್ಟ ಲಾರಿ ಮುಷ್ಕರ , ಸರಕು-ಸಾಗಾಣಿಕೆಯಲ್ಲಿ ವ್ಯತ್ಯಯ

ಈ ಸುದ್ದಿಯನ್ನು ಶೇರ್ ಮಾಡಿ

Lorry-Strike--01
ಬೆಂಗಳೂರು, ಜು.23- ತಮ್ಮ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಲಾರಿ ಮಾಲೀಕರು ನಡೆಸುತ್ತಿರುವ ಮುಷ್ಕರ ಮೂರನೆ ದಿನಕ್ಕೆ ಕಾಲಿಟ್ಟಿದೆ. ಲಾರಿ ಮುಷ್ಕರದ ಪರಿಣಾಮ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸರಕು-ಸಾಗಾಣಿಕೆಯಲ್ಲಿ ವ್ಯತ್ಯಯ ಉಂಟಾಗಿದೆ. ರಾಜ್ಯದ 6.5 ಲಕ್ಷ ಲಾರಿಗಳು ಸೇರಿದಂತೆ 90 ಲಕ್ಷ ಲಾರಿಗಳು ಸರಕು-ಸಾಗಣೆ ಸ್ಥಗಿತಗೊಳಿಸಿ ಮುಷ್ಕರಕ್ಕಿಳಿದಿವೆಯಾದರೂ ಸರ್ಕಾರ ಅವರ ಬೇಡಿಕೆಗಳ ಬಗ್ಗೆ ಗಮನ ಹರಿಸಿದಂತಿಲ್ಲ. ಮುಷ್ಕರದ ಕೂಡ ಅಷ್ಟು ಪರಿಣಾಮ ಬೀರಿದಂತಿಲ್ಲ. ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಷ್ಕರವನ್ನು ತೀವ್ರಗೊಳಿಸುವುದಾಗಿ ಫೆಡರೇಷನ್ ಆಫ್ ಲಾರಿ ಓನರ್ಸ್ ಅಂಡ್ ಏಜೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ.

ಟೋಲ್ ಮುಕ್ತ ಮಾಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದೆವು. ಟೋಲ್ ಹಣವನ್ನು ಮೊದಲೇ ಕಟ್ಟಲು ಸಿದ್ಧರಿದ್ದೇವೆ. ಆದರೆ, ಕೇಂದ್ರ ಸರ್ಕಾರ ಟೋಲ್ ಫ್ರೀ ಮಾಡುವುದಾಗಿ ಹೇಳಿ ಗುತ್ತಿಗೆದಾರರಿಗೆ ಟೋಲ್ ವಸೂಲಿಗೆ ನೀಡಿದೆ. ಪ್ರತಿ ಟೋಲ್ ಸಂಗ್ರಹ ಗೇಟ್‍ಗಳಲ್ಲಿ ಗಂಟೆಗಟ್ಟಲೆ ಲಾರಿಗಳನ್ನು ನಿಲ್ಲಿಸಿಕೊಂಡಿರಬೇಕಾಗುತ್ತದೆ. ಇದರಿಂದ ಡೀಸೆಲ್ ಹಾಗೂ ಸಮಯ ವ್ಯರ್ಥವಾಗುತ್ತದೆ. ಇದಲ್ಲದೆ ಡೀಸೆಲ್‍ಅನ್ನು ಜಿಎಸ್‍ಟಿ ವ್ಯಾಪ್ತಿಗೆ ತರಬೇಕು. ಥರ್ಡ್ ಪಾರ್ಟಿ ಇನ್ಸೂರೆನ್ಸ್ ವಿಧಿಸಿರುವ ನಿಯಮಗಳನ್ನು ಕೈ ಬಿಡಬೇಕು ಎಂಬುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ಅಗತ್ಯ ದಿನಬಳಕೆ ವಸ್ತುಗಳಾದ ಹಾಲು, ಹಣ್ಣು, ಔಷಧಿಗಳ ಸಾಗಾಣಿಕೆಗೆ ಯಾವುದೇ ತೊಂದರೆಯಾಗದಂತೆ ಪ್ರತಿಭಟನೆ ನಡೆಸುತ್ತಿದ್ದೇವೆ. ಸರ್ಕಾರ ತನ್ನ ಧೋರಣೆಯನ್ನು ಇದೇ ರೀತಿ ಮುಂದುವರಿಸಿದರೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.

Facebook Comments

Sri Raghav

Admin