ಭರ್ತಿಯಾದ ಮೆಟ್ಟೂರು ಜಲಾಶಯ, ನಿಟ್ಟುಸಿರುಬಿಟ್ಟ ಉಭಯ ರಾಜ್ಯಗಳ ರೈತರು

ಈ ಸುದ್ದಿಯನ್ನು ಶೇರ್ ಮಾಡಿ

Metturu-Dam--01
ಬೆಂಗಳೂರು, ಜು.23- ಕಾವೇರಿ ನದಿ ಪಾತ್ರದ ಎಲ್ಲಾ ಪ್ರಮುಖ ಜಲಾಶಯಗಳು ಜುಲೈ ಮೂರನೇ ವಾರದೊಳಗೆ ಪೂರ್ಣಪ್ರಮಾಣದಲ್ಲಿ ಭರ್ತಿಯಾಗುವ ಮೂಲಕ ಕರ್ನಾಟಕ-ತಮಿಳುನಾಡಿನ ನದಿ ನೀರು ಹಂಚಿಕೆ ಬಿಕ್ಕಟ್ಟಿಗೆ ತಾತ್ಕಾಲಿಕ ಪರಿಹಾರ ದೊರೆತಂತಾಗಿದೆ. ಇದರಿಂದ ಈ ಬಾರಿ ಉಭಯ ರಾಜ್ಯಗಳ ನಡುವೆ ಕಾವೇರಿ ನೀರು ಹಂಚಿಕೆಯ ಸಮಸ್ಯೆ ಉಲ್ಬಣವಾಗುವುದಿಲ್ಲ ಎಂಬ ನಿರೀಕ್ಷೆ ವ್ಯಕ್ತವಾಗುತ್ತಿದೆ. ತಮಿಳುನಾಡಿನ ಮೆಟ್ಟೂರು ಜಲಾಶಯವೂ ಭರ್ತಿಯಾಗಿದ್ದು, ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ.

ಪ್ರಕೃತಿಯೇ ಎರಡೂ ರಾಜ್ಯಗಳ ಪ್ರಮುಖ ಸಮಸ್ಯೆಗೆ ಪರಿಹಾರ ನೀಡಿದೆ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಪ್ರತಿ ವರ್ಷವೂ ಬಿಕ್ಕಟ್ಟು ತಲೆದೋರಿ ಉಭಯ ರಾಜ್ಯಗಳ ಸರ್ಕಾರಗಳಿಗೆ ತಲೆನೋವಾಗಿ ಪರಿಣಮಿಸುತ್ತಿತ್ತು. ಆದರೆ ಕಾವೇರಿ ಜಲಾನಯನ ಭಾಗದಲ್ಲಿ ಈ ಬಾರಿ ಮುಂಗಾರು ಮಳೆ ಆರಂಭದಲ್ಲೇ ಉತ್ತಮವಾಗಿದ್ದರಿಂದ ಕಾವೇರಿ ಕೊಳ್ಳದ ಎಲ್ಲಾ ಜಲಾಶಯಗಳು ಭರ್ತಿಯಾಗಿ ಉಭಯ ರಾಜ್ಯಗಳ ರೈತರ ಸಂಕಷ್ಟ ಪರಿಹಾರವಾಗಿರುವುದು ಒಂದೆಡೆಯಾದರೆ, ಉಭಯ ರಾಜ್ಯಗಳ ಸರ್ಕಾರಗಳು ಕೂಡ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ತಮಿಳುನಾಡಿನ ಪ್ರಮುಖ ಜಲಾಶಯವಾದ ಮೆಟ್ಟೂರು ಈಗಾಗಲೇ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದ್ದು, ಜಲಾಶಯದಿಂದ 30 ಸಾವಿರ ಕ್ಯೂಸೆಕ್‍ಗೂ ಹೆಚ್ಚಿನ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಕರ್ನಾಟಕದ ಪ್ರಮುಖ ಜಲಾಶಯಗಳಾದ ಹೇಮಾವತಿ, ಕೆಆರ್‍ಎಸ್, ಹಾರಂಗಿ ಹಾಗೂ ಕಬಿನಿ ಜಲಾಶಯಗಳು ಒಂದು ವಾರ ಮುಂಚೆಯೆ ಭರ್ತಿಯಾಗಿದ್ದವು. ಕರ್ನಾಟಕದಿಂದ ಸುಮಾರು 70 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಕಳೆದ ಎರಡು ವಾರಗಳಿಂದ ಕಾವೇರಿ ನದಿಗೆ ಬಿಡಲಾಗುತ್ತಿತ್ತು. ಇದರ ಪರಿಣಾಮ ಸುಮಾರು 93 ಟಿಎಂಸಿ ಅಡಿ ಸಾಮಥ್ರ್ಯದ ಮೆಟ್ಟೂರು ಜಲಾಶಯ ಭರ್ತಿಯಾಗಿದೆ.

ಜುಲೈನಲ್ಲೇ ಕಾವೇರಿ ಕೊಳ್ಳದ ಜಲಾಶಯಗಳು ಭರ್ತಿಯಾಗಿರುವುದು ಈ ಬಾರಿಯ ವಿಶೇಷ. ಕಳೆದ ನಾಲ್ಕೈದು ವರ್ಷಗಳಿಂದ ಬರದ ಛಾಯೆಗೆ ಸಿಲುಕಿ ಉಭಯ ರಾಜ್ಯಗಳ ಜಲಾಶಯಗಳು ಭರ್ತಿಯಾಗದೆ ಕಾವೇರಿ ಬಿಕ್ಕಟ್ಟು ಉಲ್ಬಣಗೊಂಡಿದ್ದಲ್ಲದೆ ಉಭಯ ರಾಜ್ಯಗಳ ರೈತರು ತೀವ್ರ ಸಂಕಷ್ಟ ಅನುಭವಿಸಿದ್ದರು. ಈ ಬಾರಿಯ ಮುಂಗಾರು ರೈತರ ಪಾಲಿಗೆ ವರವಾಗಿ ಪರಿಣಮಿಸಿದ್ದು, ಕಾವೇರಿ ಜಲಾನಯನ ಭಾಗದ ರೈತರು ಉತ್ಸಾಹದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.

ಜುಲೈ ತಿಂಗಳ ಅಂತ್ಯಕ್ಕೆ ಕರ್ನಾಟಕದಿಂದ ತಮಿಳುನಾಡಿಗೆ ಬಿಡಬೇಕಾಗಿದ್ದ ನೀರಿನ ಪ್ರಮಾಣಕ್ಕಿಂತ ಎರಡು ಪಟ್ಟು ಅಧಿಕ ಪ್ರಮಾಣದ ನೀರನ್ನು ಈಗಾಗಲೇ ಬಿಡಲಾಗಿದೆ. ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪಿನ ಪ್ರಕಾರ ಜುಲೈ ಅಂತ್ಯಕ್ಕೆ ಸುಮಾರು 40 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಬಿಡಬೇಕಾಗಿತ್ತು. ಕಾವೇರಿ ಜಲಾನಯನ ಭಾಗದಲ್ಲಿ ಈ ಬಾರಿ ಉತ್ತಮ ಮಳೆಯಾದುದರಿಂದ ಹೆಚ್ಚುವರಿ ನೀರು ತಮಿಳುನಾಡು ಪಾಲಾಗಿದೆ.

Facebook Comments

Sri Raghav

Admin