ಅದ್ದೂರಿಯಾಗಿ ನಾಡಹಬ್ಬ ದಸರಾ ಆಚರಣೆಗೆ ಭರ್ಜರಿ ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

dasara--mysore

ಮೈಸೂರು, ಜು.23-ನಾಡಹಬ್ಬ ದಸರಾವನ್ನು ಈ ಬಾರಿ ಅತ್ಯಾಕರ್ಷಕವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಸೂಚಿಸಿದ್ದಾರೆ. ತಮ್ಮ ಕಚೇರಿಯಲ್ಲಿ ನಡೆದ ದಸರಾ ಮಹೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಸರಾ ಹಬ್ಬವನ್ನು ಅತ್ಯಾಕರ್ಷಕವಾಗಿ ಆಚರಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸೂಚಿಸಿರುವ ಹಿನ್ನೆಲೆಯಲ್ಲಿ ವಿಜಯದಶಮಿ ದಿನ ಬನ್ನಿಮಂಟಪದ ಕವಾಯತು ಮೈದಾನದಲ್ಲಿ ನಡೆಯಲಿರುವ ಪಂಜಿನ ಕವಾಯತು ಪ್ರದರ್ಶನದಲ್ಲಿ ಜೂಡೋ, ಮಾರ್ಷಲ್ ಆರ್ಟ್ ಹಾಗೂ ಹೊಗೆ ರಹಿತ ಪರಿಸರ ಸ್ನೇಹಿ ವಿದ್ಯುನ್ಮಾನ, ಬಾಣ-ಬಿರುಸು ಪ್ರದರ್ಶನ ನಡೆಸಲು ಉದ್ದೇಶಿಸಲಾಗಿದೆ ಎಂದರು.

ಪ್ರತಿ ಬಾರಿಗಿಂತ ಈ ಬಾರಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ದಸರಾ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಹೇಳಿದರು. ದಸರಾ ಕಾರ್ಯಕ್ರಮದ ವೇಳೆ ತರಾತುರಿಯಲ್ಲಿ ಕಾಮಗಾರಿ ಮಾಡದೆ ಈಗಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಹೇಳಿದರು.
ದೀಪಾಲಂಕಾರ ಸಂದರ್ಭದಲ್ಲಿ ಮರಗಳಿಗೆ ಹಾಗೂ ಪಕ್ಷಿಗಳಿಗೆ ಧಕ್ಕೆಯಾಗದಂತೆ ಪರಿಸರ ಸ್ನೇಹಿ ದೀಪಾಲಂಕಾರ ಮಾಡಲು ಜಿಲ್ಲಾಧಿಕಾರಿಗಳು ತಿಳಿಸಿದರು.

ದಸರಾ ಚಲನಚಿತ್ರೋತ್ಸವದ ಅಂಗವಾಗಿ ಕಾರ್ಯಾಗಾರಗಳನ್ನು ಆಯೋಜಿಸಿ ಪರಿಣಿತರಿಂದ ಚಲನಚಿತ್ರ ನಿರ್ಮಾಣ, ನಿರ್ದೇಶನ, ಸಂಕಲನ ಹಾಗೂ ಛಾಯಾಗ್ರಹಣ ಸೇರಿದಂತೆ ಚಿತ್ರೋದ್ಯಮದ ಬಗ್ಗೆ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಜಿಪಂ ಸಿಇಒ ಶಿವಶಂಕರ್, ಅಪರ ಜಿಲ್ಲಾಧಿಕಾರಿ ಯೋಗೇಶ್, ಡಿಸಿಪಿ ವಿಕ್ರಮ್ ಆಮ್ಟೆ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments

Sri Raghav

Admin