ಹೆಲಿಪ್ಯಾಡ್ ನಿರ್ಮಿಸಲು ಮುಂದಾಗಿರುವ ಬಿಬಿಎಂಪಿಗೆ ಹಸಿರು ಪೀಠ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

NGT

ಬೆಂಗಳೂರು, ಜು.23- ಬಿಬಿಎಂಪಿ ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೆಲಿಪ್ಯಾಡ್ ಯೋಜನೆಗೆ ಹಸಿರು ನ್ಯಾಯಾಧೀಕರಣ ತಣ್ಣೀರೆರಚಿದ್ದು, ದೂರದೃಷ್ಟಿ ಇಲ್ಲದ ಯೋಜನೆಯ ಅನುಷ್ಠಾನಕ್ಕೆ ತರಾತುರಿ ಏಕೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ. ಕಸ ವಿಲೇವಾರಿ ಘಟಕಗಳ ಮೇಲೆ ಮಣ್ಣು ಮುಚ್ಚಿ ಹೆಲಿಪ್ಯಾಡ್ ನಿರ್ಮಿಸುವುದು ಎಷ್ಟು ಸರಿ ಎಂದು ಕೆಂಡಾಮಂಡಲವಾಗಿರುವ ನ್ಯಾಯಪೀಠ, ಮಿಥೇನ್‍ನಂತಹ ಅಗ್ನಿಕಾರಕ ರಾಸಾಯನಿಕಗಳು ಸೃಷ್ಟಿಸಬಹುದಾದ ಭವಿಷ್ಯದ ಆತಂಕದ ಅರಿವು ನಿಮಗಿದೆಯೇ, ಹೆಲಿಪ್ಯಾಡ್ ನಿರ್ಮಿಸಲು ಉದ್ದೇಶಿಸಿರುವ ಜಾಗದಲ್ಲಿ ಬೆಂಕಿ ಸೃಷ್ಟಿಯಾದರೆ ಯಾರು ಹೊಣೆ ಎಂದು ಅಧಿಕಾರಿಗಳನ್ನು ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದ ನ್ಯಾಯಪೀಠದ ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಸಂಬಂಧ ಆಗಸ್ಟ್ 8ರಂದು ಖುದ್ದು ಬಿಬಿಎಂಪಿ ಆಯುಕ್ತರು ಹಸಿರು ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಧೀಶರು ಖಡಕ್ ಸೂಚನೆ ನೀಡಿದ್ದಾರೆ. ಎನ್‍ಜಿಟಿಯ ಆದೇಶದಿಂದ ಹೆಲಿಪ್ಯಾಡ್ ನಿರ್ಮಿಸುವ ಬಿಬಿಎಂಪಿ ನಿರ್ಧಾರಕ್ಕೆ ಹಿನ್ನಡೆಯಾಗಿದ್ದು, ಟೆಂಡರ್ ಕರೆಯಲು ತರಾತುರಿಯಲ್ಲಿದ್ದ ಅಧಿಕಾರಿಗಳ ನಿರ್ಧಾರ ಸಾರ್ವಜನಿಕ ಟೀಕೆಗೂ ಗುರಿಯಾಗಿದೆ. ಬೆಂಗಳೂರು ವ್ಯಾಪ್ತಿಯ ನಾಲ್ಕು ಕಡೆಗಳಲ್ಲಿ ಹೆಲಿಪ್ಯಾಡ್ ನಿರ್ಮಿಸಲು ಬಿಬಿಎಂಪಿ ಯೋಜನೆ ರೂಪಿಸಿತ್ತು. ನಾಲ್ಕು ಹೆಲಿಪ್ಯಾಡ್ ಪೈಕಿ ಒಂದನ್ನು ಬಾಗಲೂರಿನ ಬೆಳ್ಳಳ್ಳಿ ಕ್ವಾರಿಯ ಮೇಲೆ ನಿರ್ಮಿಸಲು ಉದ್ದೇಶಿಸಲಾಗಿತ್ತು. ಇದನ್ನು ಉಲ್ಲೇಖಿಸಿ ರಾಷ್ಟ್ರೀಯ ಹಸಿರು ನ್ಯಾಯಪೀಠ, ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದೆ.

Facebook Comments

Sri Raghav

Admin