ಮೈತ್ರಿ ವಿರುದ್ಧ ಹೇಳಿಕೆ ನೀಡಿದ್ದ ಕೋಳಿವಾಡ, ರಾಜಣ್ಣಗೆ ನೋಟಿಸ್

ಈ ಸುದ್ದಿಯನ್ನು ಶೇರ್ ಮಾಡಿ

Koliwada-rajanna

ಬೆಂಗಳೂರು, ಜು.24- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರಿಗೆ ಕಾರಣ ಕೇಳಿ ಕೆಪಿಸಿಸಿ ನೋಟಿಸ್ ಜಾರಿ ಮಾಡಿದೆ. ಮೈತ್ರಿ ಸರ್ಕಾರಕ್ಕೆ ವಿರುದ್ಧವಾಗಿ ಮತ್ತು ಪಕ್ಷಕ್ಕೆ ಮುಜುಗರವಾಗುವಂತಹ ಹೇಳಿಕೆ ನೀಡುತ್ತಿದ್ದೀರಿ, ಈ ಬಗ್ಗೆ ಒಂದು ವಾರದಲ್ಲಿ ಉತ್ತರ ಕೊಡಬೇಕು, ಇಲ್ಲದಿದ್ದರೆ ಪಕ್ಷದ ವತಿಯಿಂದ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪದಲ್ಲಿ  ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ. ಘೋರ್ಪಡೆ ನೀಡಿರುವ ನೋಟಿಸ್‍ನಲ್ಲಿ ತಿಳಿಸಿದ್ದಾರೆ.

ಜೆಡಿಎಸ್ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಕಣ್ಣೀರು ಹಾಕಿದ ಘಟನೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕೋಳಿವಾಡ್, ಮುಖ್ಯಮಂತ್ರಿಯವರು ಕಣ್ಣೀರಿಗೆ ಕಾಂಗ್ರೆಸ್ ನಾಯಕರೇ ಕಾರಣ ಎಂದು ಹೇಳಿದ್ದರಲ್ಲರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ಎಚ್.ಡಿ.ಕುಮಾರಸ್ವಾಮಿಯವರು ಪೂರ್ಣಾವಧಿ ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ನಾಯಕರು ಬಿಡುವುದಿಲ್ಲ ಎಂದು ಹೇಳಿದ್ದರು.

ಅದೇ ರೀತಿ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರು, ಸಮ್ಮಿಶ್ರ ಸರ್ಕಾರ ಮೈತ್ರಿ ಧರ್ಮ ಪಾಲನೆ ಮಾಡುತ್ತಿಲ್ಲ. ಈ ಸರ್ಕಾರಕ್ಕೆ ಹೆಚ್ಚಿನ ಆಯುಷ್ಯವಿಲ್ಲ. ಸರ್ಕಾರ ಶೀಘ್ರ ಪತನವಾಗಲಿದೆ ಎಂದು ಹೇಳಿದ್ದರು.  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆ.ಬಿ.ಕೋಳಿವಾಡ ಅವರು, ನಾನು ಕಾಂಗ್ರೆಸ್ ಪಕ್ಷಕ್ಕೆ ವಿರುದ್ಧವಾಗಿ ಯಾವತ್ತೂ ನಡೆದುಕೊಂಡಿಲ್ಲ. ನನ್ನ ಕಣದಲ್ಲೂ ಕಾಂಗ್ರೆಸ್ ಇದೆ. ನಾನೇ ಎಲ್ಲಾ, ನನ್ನಿಂದಲೇ ಎಲ್ಲಾ ಎಂದು ಹೇಳುವವರ ಹೇಳಿಕೆ ನೀಡಿದ್ದೇನೆ. ನೋಟಿಸ್ ಬರಲಿ, ಅದಕ್ಕೆ ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ.

Facebook Comments

Sri Raghav

Admin