ಖಾಸಗಿ ಶಾಲೆಗಳ ಮಕ್ಕಳಿಗೂ ಉಚಿತ ‘ಬಸ್ ಪಾಸ್ ಭಾಗ್ಯ’

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy-CM
ಬೆಂಗಳೂರು, ಜು.24 -ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೂ ಕೂಡ ಉಚಿತ ಬಸ್ ಪಾಸ್ ನೀಡುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಕೇವಲ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗಷ್ಟೇ ಉಚಿತ ಬಸ್ ಪಾಸ್ ನೀಡುವ ಕುರಿತು ನೀಡಿರುವ ಮುಖ್ಯಮಂತ್ರಿ ಹೇಳಿಕೆಗೆ ಪೋಷಕರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೂ ಕೂಡ ಬಸ್ ಪಾಸ್ ನೀಡುವ ಸಾಧ್ಯತೆ ಇದೆ.

ಖಾಸಗಿ, ಸರ್ಕಾರಿ ಎಂದು ಭೇದಭಾವ ಮಾಡುವುದು ಎಷ್ಟು ಸರಿ ? ಅಮಾಯಕ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುವುದು ಯಾಕೆ ? ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಶ್ರೀಮಂತರ ಮಕ್ಕಳಲ್ಲ, ಮಠಮಂದಿರದ ಶಾಲೆಗಳಲ್ಲೂ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ, ಇಂತಹ ಮಕ್ಕಳೆಲ್ಲಾ ಶ್ರೀಮಂತರ ಮಕ್ಕಳಲ್ಲ, ಇದನ್ನೆಲ್ಲಾ ಸರ್ಕಾರ ಅರ್ಥ ಮಾಡಿಕೊಳ್ಳದೆ ಏಕಾಏಕಿ ತೀರ್ಮಾನ ಕೈಗೊಳ್ಳುವುದು ತಪ್ಪು ಎಂಬ ಆಕ್ಷೇಪ ಪೋಷಕರ ವಲಯದಿಂದ ಕೇಳಿಬಂದಿದೆ. ಉಚಿತ ಬಸ್ ಪಾಸ್ ನೀಡುವುದಾದರೆ ಎಲ್ಲರಿಗೂ ಕೊಡಬೇಕು. ಖಾಸಗಿ, ಸರ್ಕಾರಿ ಎಂದು ವಿಂಗಡನೆ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಖಾಸಗಿ ಶಾಲಾ ಮಕ್ಕಳಿಗೂ ಬಸ್ ಪಾಸ್ ನೀಡಲು ಸರ್ಕಾರ ಮುಂದಾಗಿದೆ.

ಇಂದು ತಮ್ಮನ್ನು ಭೇಟಿಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು, ಬಸ್ ಪಾಸ್ ಸಮಸ್ಯೆಯನ್ನು ಒಂದು ವಾರದೊಳಗೆ ಬಗೆಹರಿಸುವ ಭರವಸೆ ನೀಡಿದರು. ವಿದ್ಯಾರ್ಥಿಗಳಿಗೆ ಪಾಸ್ ನೀಡಲು ಸರ್ಕಾರ ಶೇಕಡಾ 50ರಷ್ಟು ಹಾಗೂ ಸಾರಿಗೆ ಇಲಾಖೆ ಶೇಕಡಾ 25, ವಿದ್ಯಾರ್ಥಿಗಳು ಶೇಕಡಾ 25ರಷ್ಟು ವೆಚ್ಚ ಭರಿಸುತ್ತಿದ್ದಾರೆ. ಆದರೆ ಈಗ ಉಚಿತವಾಗಿ ನೀಡಬೇಕಾಗಿರುವುದರಿಂದ ಶೇಕಡಾ 75ರಷ್ಟು ಮೊತ್ತವನ್ನು ಸರ್ಕಾರವೇ ಭರಿಸಬೇಕಾಗುತ್ತದೆ. ಈ ಸಂಬಂಧ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಇನ್ನೊಂದು ವಾರದಲ್ಲಿ ಬಸ್ ಪಾಸ್ ಸಮಸ್ಯೆ ಬಗೆಹರಿಸುವುದಾಗಿ ಸಾರಿಗೆ ಸಚಿವರು ಭರವಸೆ ನೀಡಿದರು.

Facebook Comments

Sri Raghav

Admin