ಸಂಸತ್ತಿನಲ್ಲಿ ಅಲ್ವರ್ ಹತ್ಯೆ ಪ್ರತಿಧ್ವನಿ : ಸುಪ್ರೀಂ ನ್ಯಾಯಮೂರ್ತಿ ತನಿಖೆಗೆ ಖರ್ಗೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Kharge--01
ನವದೆಹಲಿ, ಜು.24-ರಾಜಸ್ತಾನದ ಅಲ್ವರ್‍ನಲ್ಲಿ ಗೋ ಕಳ್ಳಸಾಗಣೆದಾರ ಎಂಬ ಶಂಕೆಯಿಂದ ಯುವಕನೊಬ್ಬನನ್ನು ಉದ್ರಿಕ್ತ ಗ್ರಾಮಸ್ಥರ ಗುಂಪೊಂದು ಥಳಿಸಿ ಹತ್ಯೆ ಮಾಡಿದ ಪ್ರಕರಣ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಸಂಸತ್ತಿನ ಮುಂಗಾರು ಅಧಿವೇಶನದ ಐದನೇ ದಿನವಾದ ಇಂದು ಲೋಕಸಭೆಯ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಅಲ್ವರ್ ಘಟನೆಯನ್ನು ಉಗ್ರವಾಗಿ ಖಂಡಿಸಿದರು.

ದೇಶದಲ್ಲಿ ಗೋ ಸಂರಕ್ಷಣೆ ಹೆಸರಿನಲ್ಲಿ ಸಾಮೂಹಿಕ ಹಲ್ಲೆ ಮತ್ತು ಹತ್ಯೆ ಪ್ರಕರಣ ಹೆಚ್ಚಾಗುತ್ತಿವೆ. ಸುಪ್ರೀಂಕೋರ್ಟ್ ಎಚ್ಚರಿಕೆ ನಡುವೆಯೂ ಇಂಥ ಕೃತ್ಯಗಳು ಮರುಕಳಿಸುತ್ತಿವೆ. ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದು ಗದ್ದಲದ ವಾತಾವರಣ ನಿರ್ಮಾಣವಾಯಿತು.   ಮಾತು ಮುಂದುವರಿಸಿದ ಖರ್ಗೆ, ಈ ಘಟನೆಯಲ್ಲಿ ರಾಜಸ್ತಾನ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅವರಿಂದ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.  ಗೃಹ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯಿಸಿ ಇಂಥ ಘಟನೆಗಳನ್ನು ತಡೆಗಟ್ಟಲು ಕೇಂದ್ರ ಸೂಕ್ತ ಕಾನೂನು ರೂಪಿಸಲಿದೆ ಎಂದು ಭರವಸೆ ನೀಡಿದರು.

ಮೇಲ್ಮನೆಯಲ್ಲೂ ಪ್ರಸ್ತಾಪ :

ಇದೇ ವಿಷಯ ಸಂಸತ್ತಿನ ರಾಜ್ಯಸಭೆಯಲ್ಲೂ ಪ್ರಸ್ತಾಪವಾಯಿತು. ಗೋ ರಕ್ಷಕರ ಸೋಗಿನಲ್ಲಿ ನಡೆಯುವ ಇಂಥ ಕೃತ್ಯಗಳನ್ನು ತಡೆಗಟ್ಟಲು ಸೂಕ್ತ ಕಾನೂನು ರೂಪಿಸುವಂತೆ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸದಸ್ಯರು ಆಗ್ರಹಿಸಿದರು. ಇಂಥ ಕೃತ್ಯಗಳನ್ನು ತಡೆಗಟ್ಟಲು ಸೂಕ್ತ ಕಾನೂನು ರೂಪಿಸುವಂತೆ ಕಳೆದ ವಾರ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದರೂ, ಈವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಟಿಎಂಸಿ ಸದಸ್ಯೆ ಶಾಂತಾ ಚೆಟ್ರಿ ಆರೋಪಿಸಿದರು. ಇದಕ್ಕೆ ಇತರ ಪ್ರತಿಪಕ್ಷಗಳು ಧನಿಗೂಡಿಸಿದವು.
ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸವನ್ನು ಸಭಾಪತಿ ಎಂ.ವೆಂಕಯ್ಯನಾಯ್ಡು ಸದನದಲ್ಲಿ ವ್ಯಕ್ತಪಡಿಸಿದರು.

Facebook Comments

Sri Raghav

Admin