ಗುಂಡಿ ಮುಚ್ಚುವ ನೆಪದಲ್ಲಿ ಸರ್ಕಾರದ ಹಣ ಪೋಲು

ಈ ಸುದ್ದಿಯನ್ನು ಶೇರ್ ಮಾಡಿ

NR-Ramesh
ಬೆಂಗಳೂರು, ಜು.24-ಬೆಂಗಳೂರು ನಗರದ ರಸ್ತೆಗಳ ಗುಂಡಿ ಮುಚ್ಚುವ ನೆಪದಲ್ಲಿ ನಾಗರಿಕ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರು ನಗರ ಅಭಿವೃದ್ಧಿ ಸಚಿವರಾದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬೆಂಗಳೂರು ಮಹಾನಗರದ ರಸ್ತೆಗಳಲ್ಲಿರುವುದು ಕೇವಲ 940 ಗುಂಡಿಗಳು. ಆದರೆ ವಾಸ್ತವದಲ್ಲಿ 8 ಸಾವಿರ ಗುಂಡಿಗಳಿವೆ. ವಾಸ್ತವವನ್ನು ಮರೆಮಾಚಿ ಅವರು ಅಂಕಿಅಂಶಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಜು.19 ರಿಂದ 22ರವರೆಗೆ ಬಿಬಿಎಂಪಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ರಸ್ತೆಗಳಲ್ಲಿ ಸುಮಾರು 8 ಸಾವಿರ ಗುಂಡಿಗಳು ಬಿದ್ದಿರುವುದು ಪತ್ತೆಯಾಗಿದೆ. ಕೇವಲ ಮುಖ್ಯರಸ್ತೆಗಳಲ್ಲೇ ಇಷ್ಟು ಪ್ರಮಾಣದ ಗುಂಡಿಗಳು ಇದ್ದರೆ, ಇನ್ನುಳಿದಂತೆ ಇರುವ ಸಾಮಾನ್ಯ ರಸ್ತೆಗಳಲ್ಲಿ ಇನ್ನೆಷ್ಟು ಪ್ರಮಾಣದ ಗುಂಡಿಗಳಿರಬಹುದು ಎಂದು ಪ್ರಶ್ನಿಸಿದ ರಮೇಶ್ ಅವರು ಪತ್ರಿಕಾಗೋಷ್ಠಿಯಲ್ಲಿಂದು ಈ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿದರು. ಕಳೆದ ಜು.18 ರಂದು ಡಾ.ಜಿ.ಪರಮೇಶ್ವರ್ ಅವರು ಪತ್ರಿಕಾಗೋಷ್ಠಿ ನಡೆಸಿ ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳಲ್ಲಿ ಒಟ್ಟು 15,239 ರಸ್ತೆ ಗುಂಡಿಗಳಿದ್ದು, ಅದರಲ್ಲಿ ಜೂ.6 ರಿಂದ ಜು.17ರ 33 ದಿನಗಳಲ್ಲಿ ಒಟ್ಟು 14,299 ಗುಂಡಿಗಳನ್ನು ಮುಚ್ಚಲಾಗಿದೆ . ಬಾಕಿ 949 ಗುಂಡಿಗಳಿವೆ ಎಂದು ಹೇಳಿದ್ದರು.

ಬಿಬಿಎಂಪಿಯ 8 ವಲಯಗಳ ಮುಖ್ಯ ಅಭಿಯಂತರರು ಮತ್ತು 27 ವಿಧಾನಸಭಾ ಕ್ಷೇತ್ರಗಳ ಕಾರ್ಯಪಾಲಕ ಅಭಿಯಂತರರು ನೀಡಿರುವ ತಪ್ಪು ಮಾಹಿತಿಯನ್ನು ನಿಜವೆಂದು ಉಪಮುಖ್ಯಮಂತ್ರಿಗಳು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಡಾಂಬರೀಕರಣ ಮಾಡಲಾಗಿರುವ 750 ಕಿ.ಮೀ. ಉದ್ದದ ಮುಖ್ಯರಸ್ತೆಗಳ ನಿರ್ವಹಣಾ ಅವಧಿ, ಮತ್ತು ದೋಷಗಳ ಹೊಣೆಗಾರಿಕಾ ಅವಧಿ ಇನ್ನೂ ಮುಗಿದೇ ಇಲ್ಲ. ಈ ಎಲ್ಲಾ ರಸ್ತೆಗಳಲ್ಲಿ ಬಿದ್ದಿರುವ ಬೀಳುತ್ತಿರುವ ಗುಂಡಿಗಳನ್ನು ತಮ್ಮ ಖರ್ಚಿನಿಂದಲೇ ಮುಚ್ಚುವ ಹೊಣೆಗಾರಿಕೆ ಆಯಾ ಗುತ್ತಿಗೆದಾರರದ್ದೇ ಆಗಿರುತ್ತದೆ. ಆದರೂ ಅಧಿಕಾರಿಗಳು ಅವರೊಂದಿಗೆ ಶಾಮೀಲಾಗಿ ರಸ್ತೆ ಗುಂಡಿಗಳನ್ನು ಮುಚ್ಚಲು ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.  ನಗರ ಅಭಿವೃದ್ಧಿ ಸಚಿವರು ಈ ಬಗ್ಗೆ ಪರಿಶೀಲನೆ ನಡೆಸಿ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಬೇಕು. ಸರ್ಕಾರದ ಹಣವನ್ನು ಪೋಲು ಮಾಡುತ್ತಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು. ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ನೀಡಿರುವ ರಸ್ತೆ ಗುಂಡಿಗಳ ಲೆಕ್ಕ ಅಕ್ಬರ್ ಆಸ್ಥಾನದಲ್ಲಿ ಬೀರಬಲ್ ಹೇಳಿದ ಕಾಗೆಗಳ ಲೆಕ್ಕದಂತಿದೆ ಎಂದು ಲೇವಡಿ ಮಾಡಿದ್ದಾರೆ. ರಸ್ತೆ ಗುಂಡಿ ಮುಚ್ಚುವ ನೆಪದಲ್ಲಿ ಅಧಿಕಾರಿಗಳು ಪಾಲಿಕೆ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ. ಇದನ್ನು ನಿಯಂತ್ರಿಸಬೇಕು ಎಂದು ಅವರು ಆಗ್ರಹಿಸಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin