ಸೈಕೋ ಕಾಟದಿಂದ ನರ್ಸಿಂಗ್ ಹಾಸ್ಟೆಲ್‍ಗೆ 1 ವಾರ ರಜೆ..!

ಈ ಸುದ್ದಿಯನ್ನು ಶೇರ್ ಮಾಡಿ

Mysuru-phyco

ಮೈಸೂರು, ಜು.25- ಇಲ್ಲಿನ ನರ್ಸಿಂಗ್ ಆಸ್ಪತ್ರೆಯ ಹಾಸ್ಟೆಲ್ ಬಳಿ ಸೈಕೋ ಪ್ರತ್ಯಕ್ಷಗೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಸ್ಪತ್ರೆಯ ಆಡಳಿತ ಮಂಡಳಿ, ಭದ್ರತೆ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಇಂದಿನಿಂದ ಒಂದು ವಾರ ಕಾಲ ರಜೆ ನೀಡಿದೆ. ಈಗಾಗಲೇ ಅರ್ಧದಷ್ಟು ವಿದ್ಯಾರ್ಥಿನಿಯರು ಸೈಕೋ ಪ್ರಕರಣದಿಂದ ಹೆದರಿ ಹಾಸ್ಟೆಲ್ ತೊರೆದು ಮನೆಗೆ ತೆರಳಿದ್ದರು. ಮಾತ್ರವಲ್ಲ ಉಳಿದ ವಿದ್ಯಾರ್ಥಿನಿಯರು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿ, ಹಾಸ್ಟೆಲ್‍ಗೆ ಭದ್ರತೆ ಒದಗಿಸುವಂತೆ ಒತ್ತಾಯಿಸಿದ್ದರು.

ಈ ವಿಷಯ ಅರಿತ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಕೂಡ ನಿನ್ನೆ ಹಾಸ್ಟೆಲ್‍ಗೆ ಭೇಟಿ ನೀಡಿ, ಅಗತ್ಯ ಭದ್ರತೆ ಒದಗಿಸುವ ಭರವಸೆ ನೀಡಿದ್ದರು. ಸಚಿವರು ಭೇಟಿ ನೀಡಿ ಹೋದ ಬಳಿಕವೂ ಸೈಕೋ ಪ್ರತ್ಯಕ್ಷಗೊಂಡಿದ್ದರಿಂದ ವಿದ್ಯಾರ್ಥಿಗಳು ಭೀತಿಗೊಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಒಂದು ವಾರ ರಜೆ ನೀಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.ಹಾಸ್ಟೆಲ್ ಕಂಪೌಂಡ್‍ಗೆ ತಂತಿ ಬೇಲಿ ನಿರ್ಮಿಸುವುದು, ಮೂರು ಪಾಳಿಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನೇಮಿಸುವುದು, ಹಾಸ್ಟೆಲ್ ಬಳಿ ಪೊಲೀಸರ ನಿಯೋಜನೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದ್ದು, ಈ ಕ್ರಮ ಜಾರಿಯಾಗುವವರೆಗೂ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ.  ಈಗಾಗಲೇ ಮೈಸೂರು ಮಹಾನಗರ ಪಾಲಿಕೆಯ ಅಭಯ ತಂಡ ಹಾಸ್ಟೆಲ್‍ಗೆ ಭೇಟಿ ನೀಡಿ, ಹಾಸ್ಟೆಲ್ ಸುತ್ತಲಿನ ಗಿಡಗಂಟಿಗಳನ್ನು ತೆಗೆದು ಸ್ವಚ್ಛತಾ ಕಾರ್ಯ ನಡೆಸಿದೆ.

Facebook Comments

Sri Raghav

Admin