ಪ್ರಧಾನಿ ಅಭ್ಯರ್ಥಿ ರಾಹುಲ್’ಗೆ ಮಿತ್ರ ಪಕ್ಷಗಳ ಬೆಂಬಲವಿಲ್ಲದೆ ಕಾಂಗ್ರೆಸ್ ಹತಾಶೆಯಲ್ಲಿದೆ : ಅನಂತ್‍ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

Anant-Kumar--01

ನವದೆಹಲಿ, ಜು.25- ಪ್ರಧಾನಿ ಅಭ್ಯರ್ಥಿ ರಾಹುಲ್‍ಗಾಂಧಿ ವಿಷಯದಲ್ಲಿ ಪ್ರತಿಪಕ್ಷಗಳ ವ್ಯತಿರಿಕ್ತ ಪ್ರತಿಕ್ರಿಯೆಗಳಿಂದ ಕಾಂಗ್ರೆಸ್‍ಗೆ ಹತಾಶೆಯಾಗಿದೆ ಎಂದು ಕೇಂದ್ರ ಸಚಿವ ಅನಂತ್‍ಕುಮಾರ್ ಹೇಳಿದ್ದಾರೆ. ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳುವ ಮುನ್ನ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಧಾನಿ ಅಭ್ಯರ್ಥಿ ಎನಿಸುವ ರಾಹುಲ್‍ಗೆ ಮಿತ್ರ ಪಕ್ಷಗಳಿಂದ ಸೂಕ್ತ ಬೆಂಬಲ ವ್ಯಕ್ತವಾಗಿಲ್ಲ. ಇದರಿಂದಾಗಿ ಹತಾಶೆಗೊಂಡಿರುವ ಕಾಂಗ್ರೆಸ್ ಯಾರು ಬೇಕಾದರೂ ಪ್ರಧಾನಿ ಪಟ್ಟಕ್ಕೇರಬಹುದು ಎಂಬ ಹೇಳಿಕೆ ನೀಡಿದೆ ಎಂದು ತಿಳಿಸಿದರು. ಸಿಡಬ್ಲ್ಯೂಸಿ ಸಭೆಯಲ್ಲಿ ಪ್ರಧಾನಿ ಪಟ್ಟಕ್ಕೆ ರಾಹುಲ್‍ಗಾಂಧಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಆದರೆ, ನಂತರ ಪ್ರತಿಪಕ್ಷಗಳಲ್ಲಿ ಈ ಬಗ್ಗೆ ಊಹೆಗೂ ನಿಲುಕದ ವ್ಯತಿರಿಕ್ತ ಪ್ರತಿಕ್ರಿಯೆ ಕಂಡುಬಂದಿದೆ ಎಂದರು.

ಕಾಂಗ್ರೆಸ್ ಈ ನಿರ್ಧಾರ ಕೈಗೊಂಡ ದಿನವೇ ಪ್ರತಿಪಕ್ಷಗಳಲ್ಲಿ ಬಿರುಕುಂಟಾಗಲಿದೆ ಎಂದು ನಿರೀಕ್ಷಿಸಿದ್ದೆವು. ಆದರೆ, ಅದರ ಪರಿಣಾಮ ಇಷ್ಟು ಬೇಗ ಹೊರಬೀಳಲಿದೆ ಎಂಬುದನ್ನು ಊಹಿಸಿಯೂ ಇರಲಿಲ್ಲ ಎಂದು ತಿಳಿಸಿದರು.

ಪ್ರತಿಪಕ್ಷಗಳು ತಮ್ಮ ಉಮೇದುವಾರಿಕೆಯನ್ನು ಸ್ವೀಕರಿಸುತ್ತಿಲ್ಲ ಎಂಬುದನ್ನು ರಾಹುಲ್‍ಗಾಂಧಿಯವರೂ ಮನಗಂಡಿದ್ದಾರೆ ಎಂದು ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವರ ಮೇಲೆ ಹಕ್ಕುಚ್ಯುತಿ ಮಂಡನೆ ವಿಷಯದಲ್ಲಿ ಯಾವುದೇ ಹುರುಳಿಲ್ಲ. ನಿಲುವಳಿ ಸೂಚನೆಯನ್ನು ಮುಂದುವರಿಸಿದರೆ ಕಾಂಗ್ರೆಸಿಗರಿಗೆ ಮತ್ತೊಮ್ಮೆ ಮುಖಭಂಗವಾಗಲಿದೆ. ಸತ್ಯಾಸತ್ಯತೆ ಮತ್ತೊಮ್ಮೆ ಹೊರಬೀಳಲಿದೆ ಎಂದರು.

Facebook Comments

Sri Raghav

Admin