ಸ್ವರ್ಣಾ ನದಿಯಲ್ಲಿ ಸಿಸಿಟಿವಿ ಹಾರ್ಡ್‍ಡಿಸ್ಕ್ ಪತ್ತೆ, ಶಿರೂರು ಶ್ರೀ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Shirooru-swamiji
ಉಡುಪಿ, ಜು.25- ಸ್ವರ್ಣಾನದಿಯಲ್ಲಿ ಸಿಸಿ ಕ್ಯಾಮೆರಾದ ಹಾರ್ಡ್‍ಡಿಸ್ಕ್ ಪತ್ತೆಯಾಗುವುದರೊಂದಿಗೆ ಶೀರೂರು ಮಠದ ಲಕ್ಷ್ಮೀವರತೀರ್ಥ ಸ್ವಾಮೀಜಿಯವರ ನಿಗೂಢ ಸಾವಿನ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ. ಐಜಿಪಿ ಅರುಣ್ ಚಕ್ರವರ್ತಿ ಹಾಗೂ ಎಸ್‍ಪಿ ಲಕ್ಷ್ಮಣ ನಿಂಬರಗಿ ಅವರು ನಿನ್ನೆ ಶೀರೂರು ಮಠಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬೆನ್ನಲ್ಲೇ ಸ್ವರ್ಣಾ ನದಿಯಲ್ಲಿ ಮಠಕ್ಕೆ ಅಳವಡಿಸಿದ್ದ ಸಿಸಿ ಕ್ಯಾಮೆರಾದ ಹಾರ್ಡ್‍ಡಿಸ್ಕ್ ಪತ್ತೆಯಾಗಿದೆ.

ಇಂದು ಬೆಳಗಿನ ಜಾವ ಐವರು ಮುಳುಗುತಜ್ಞರು ಶೀರೂರು ಮೂಲಮಠದ ಸಮೀಪದಲ್ಲೇ ಇರುವ ಸ್ವರ್ಣಾ ನದಿಗೆ ಧುಮುಕಿ ಜಲಗರ್ಭ ಸೇರಿದ್ದ ಸಿಸಿ ಕ್ಯಾಮೆರಾದ ಡಿವಿಆರ್ ಪತ್ತೆಹಚ್ಚಿ ಹೊರತಂದಿದ್ದಾರೆ. ನೀರಿನಲ್ಲಿ ಬಿದ್ದಿದ್ದ ಹಾರ್ಡ್‍ಡಿಸ್ಕ್‍ನಲ್ಲಿರುವ ತಂತ್ರಾಂಶಗಳು ನಾಶವಾಗಿವೆಯೋ ಅಥವಾ ಅದರಲ್ಲಿನ ಮಾಹಿತಿ ಹೊರತೆಗೆಯುವ ಬಗ್ಗೆ ಪೊಲೀಸರು ಚಿಂತನೆ ನಡೆಸುತ್ತಿದ್ದಾರೆ.

ಮಠಕ್ಕೆ ಅಳವಡಿಸಿದ್ದ ಸಿಸಿ ಕ್ಯಾಮೆರಾದ ಡಿವಿಆರ್‍ಅನ್ನು ಶೀರೂರು ಶ್ರೀಗಳ ನಿಕಟವರ್ತಿಗಳೇ ನದಿಗೆ ತಂದು ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಶೀರೂರು ಶ್ರೀಗಳ ಸಾವು ಅಸಹಜ ಸಾವು ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದ್ದು, ಉದ್ದೇಶಪೂರ್ವಕವಾಗಿ ಅವರನ್ನು ಹತ್ಯೆ ಮಾಡಲಾಗಿದೆಯೇ ಅಥವಾ ಆಹಾರದಲ್ಲಿ ವಿಷ ಸೇರಿ ಸಾವನ್ನಪ್ಪಿದ್ದಾರೆಯೇ ಎಂಬ ಬಗ್ಗೆ ತನಿಖೆಗೆ ಮುಂದಾದ ಪೊಲೀಸರಿಗೆ ದೊರೆಯುತ್ತಿರುವ ಮಾಹಿತಿಗಳು ಅಚ್ಚರಿ ಮೂಡಿಸುತ್ತಿವೆ.

ಹಾರ್ಡ್‍ಡಿಸ್ಕ್ ನಾಪತ್ತೆ, ಮಠದ ಆವರಣದಲ್ಲಿರುವ ಬಾವಿಯಲ್ಲಿ ಪತ್ತೆಯಾದ ವಸ್ತುಗಳು ತನಿಖೆಯ ದಿಕ್ಕನ್ನೇ ಬದಲಿಸುತ್ತಿವೆ. ಶ್ರೀಗಳ ವಿಶ್ರಾಂತಿ ಕೊಠಡಿಯಲ್ಲಿ ದೊರೆತಿರುವ ಔಷಧಿ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶೀರೂರು ಶ್ರೀಗಳ ಸಾವಿಗೆ ಕಾರಣಕರ್ತಳು ಎನ್ನಲಾದ ರಮ್ಯಾಶೆಟ್ಟಿ ಅವರು ವೇಷ ಮರೆಸಿಕೊಂಡು ಪರಾರಿಯಾಗುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಆಕೆಯನ್ನು ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ರಮ್ಯಾಶೆಟ್ಟಿ ಮಾತ್ರವಲ್ಲದೆ ಇನ್ನಿತರ ಐವರನ್ನು ವಶಕ್ಕೆ ಪಡೆದಿರುವ ಪೊಲೀಸರು ನಾನಾ ಕೋನಗಳಲ್ಲಿ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ.

Facebook Comments

Sri Raghav

Admin