ಚಿತ್ರಮಂದಿರಗಳಲ್ಲಿ “ಸಂಕಷ್ಟಕರ ಗಣಪತಿ” ಪ್ರತ್ಯಕ್ಷ..!

ಈ ಸುದ್ದಿಯನ್ನು ಶೇರ್ ಮಾಡಿ

Sankastakara-Kannada-movie-
ಬೆಳ್ಳಿ ಪರದೆ ಮೇಲೆ ಈ ವಾರ ಸಂಕಷ್ಟಕರ ಗಣಪತಿ ಅದ್ಧೂರಿಯಾಗಿ ಬಿಡುಗಡೆಗೊಳ್ಳುತ್ತಿದೆ. ಸಾಮಾನ್ಯವಾಗಿ ಸಂಕಷ್ಟಹರ ಗಣಪತಿ ಎಂದು ದೇವರನ್ನು ಪೂಜಿಸಿ ತಮ್ಮ ತೊಂದರೆಗಳನ್ನು ನಿವಾರಿಸು ಎಂದು ಬೇಡಿಕೊಳ್ಳುವುದು ಸರ್ವೆ ಸಾಮಾನ್ಯ. ಆದರೆ, ಇಲ್ಲೊಂದು ತಂಡ ಸಂಕಷ್ಟ (ಕರ ಎಂದರೆ ಹಸ್ತ) ಎನ್ನುತ್ತ ಒಂದು ವಿಚಿತ್ರ ಕಾಯಿಲೆಯನ್ನು ಕಥಾರೂಪಕ್ಕೆ ಅಳವಡಿಸಿ ಹಾಸ್ಯಮಿಶ್ರಿತವಾಗಿ ಜನರ ಮುಂದೆ ತರುತ್ತಿದ್ದಾರೆ. ಪತ್ರಿಕಾ ವಲಯವೊಂದರಲ್ಲಿ ಕಾರ್ಟೂಸಿಸ್ಟ್ ಆಗಿರುವ ನಾಯಕ ನಟನಿಗೆ ಏಲಿಯನ್ ಹ್ಯಾಂಡ್ ಸಿಂಡ್ರೋಮ್ ಎಂಬ ವಿಚಿತ್ರ ಕಾಯಿಲೆಯೊಂದು ಅಟ್ಯಾಕ್ ಮಾಡಿದಾಗ  ನಾಯಕನ ಜೀವನದಲ್ಲಾದ ಬದಲಾವಣೆಗಳನ್ನು ಹಾಸ್ಯ ರೂಪದಲ್ಲಿ ಹೇಳುವ ಪ್ರಯತ್ನವನ್ನು ನಿರ್ದೇಶಕ ಅರ್ಜುನ್ ಕುಮಾರ್ ಮಾಡಿದ್ದಾರೆ.

ಈಗಾಗಲೇ ಟ್ರೈಲರ್ ಮೂಲಕವೇ ಚಿತ್ರರಂಗದಲ್ಲಿ ದೊಡ್ಡದಾಗಿ ಸದ್ದು ಮಾಡಿರುವ ಈ ಚಿತ್ರದಲ್ಲಿ ನಟ ಲಿಖಿತ್ ಶೆಟ್ಟಿ ಹಾಗೂ ಗೊರಾಡಿಯಾ ನಾಯಕ-ನಾಯಕಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಗಟ್ಟಲೆ ವ್ಯೂಸ್ ಪಡೆದಿರುವ ಈ ಚಿತ್ರದ ಟ್ರೈಲರ್ ನೋಡಿ ಹ್ಯಾಟ್ರಿಕ್ ಹೀರೋ ಶಿವಣ್ಣ, ನಟ ಗಣೇಶ್, ದುನಿಯಾ ವಿಜಯ್ ಸೇರಿದಂತೆ ಸ್ಯಾಂಡಲ್‍ವುಡ್‍ನ ಬಹುತೇಕ ಕಲಾವಿದರು ಮೆಚ್ಚುಗೆ ಸೂಚಿಸಿದ್ದಾರೆ. ಹೊಸಬರ ಚಿತ್ರವೊಂದಕ್ಕೆ ಈ ರೀತಿಯ ರೆಸ್ಪಾನ್ಸ್ ಬಂದಿರುವುದು ನಿಜಕ್ಕೂ ಸಂತಸದ ವಿಷಯವೇ. ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ, ನಾಯಕ, ನಾಯಕಿ ಹಾಜರಿದ್ದು, ಚಿತ್ರದ ಬಗ್ಗೆ ಮಾತನಾಡಿದರು. ನಾಯಕ ಲಿಖಿತ್ ಶೆಟ್ಟಿ ಮಾತನಾಡಿ, ನಾನು ಈವರೆಗೂ ಮಲ್ಟಿ ಹೀರೋ ಚಿತ್ರಗಳಲ್ಲೇ ಕಾಣಿಸಿಕೊಂಡಿದ್ದೆ. ಇದೇ ಮೊದಲ ಬಾರಿಗೆ ನಾಯಕನಾಗಿ ತೆರೆ ಮೇಲೆ ಬರುತ್ತಿದ್ದೇನೆ. ಈಗಾಗಲೇ ತೆಲಗು ನಿರ್ಮಾಪಕರೊಬ್ಬರು ನಮ್ಮ ಸಿನಿಮಾ ರೀಮೇಕ್ ರೈಟ್ಸಿಗೆ ಕೇಳಿದ್ದಾರೆ ಎಂದು ಹೇಳಿದರು.

ನಂತರ ನಾಯಕಿ ಶೃತಿ ಗೊರಾಡಿಯಾ ಮಾತನಾಡಿ, ಚಿತ್ರದ ಟ್ರೈಲರ್‍ಗೇ ಇಷ್ಟೊಂದು ಲೈಕ್ ಬಂದಿರುವುದು ನಮ್ಮಗಳ ಭರವಸೆ ಹೆಚ್ಚಿಸಿದೆ. ಈಗಾಗಲೇ ನನಗೆ ಮತ್ತೊಂದು ಸಿನಿಮಾ ಆಫರ್ ಕೂಡ ಬಂದಿದೆ. ಅಚ್ಚುತ್‍ಕುಮಾರ್ ಸೇರಿದಂತೆ ಹಲವಾರು ಹಿರಿಯ ಕಲಾವಿದರ ಜತೆ ವರ್ಕ್ ಮಾಡಿದ್ದು ಖುಷಿಯಾಗಿದೆ. ಚಿತ್ರದಲ್ಲಿ ನಾನು ಪತ್ರಿಕೆಯೊಂದರಲ್ಲಿ ವರದಿಗಾರ್ತಿಯಾಗಿ ಅಭಿನಯಿಸಿದ್ದೇನೆ. ತುಂಬಾ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡುವಂಥ ಹುಡುಗಿ. ಅಲ್ಲದೆ, ನಾನೇನು ಅಂದುಕೊಂಡಿರುತ್ತೇನೋ ಅದನ್ನು ಮಾಡಿಯೇ ತೀರಬೇಕು ಅನ್ನುವ ದಿಟ್ಟ ಹುಡುಗಿಯಾಗಿ ನನ್ನ ಪಾತ್ರ ಬರುತ್ತದೆ ಎಂದು ಹೇಳಿದರು.ನಿರ್ದೇಶಕ ಅರ್ಜುನ್ ಕುಮಾರ್ ಮಾತನಾಡಿ, ಮನುಷ್ಯನ ಜೀವನದಲ್ಲಿ ಏನನ್ನಾದರು ಕೊರತೆ ಉಂಟಾದಾಗ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಕಾಮಿಡಿಯಾಗಿ ಹೇಳುವ ಪ್ರಯತ್ನ ಹಾಸ್ಯದ ಹಿನ್ನೆಲೆಯಲ್ಲಿ ಗಂಭೀರ ಸಮಸ್ಯೆಯನ್ನು ತೋರಿಸಿದ್ದೇವೆ ಎಂದು ಹೇಳಿದರು.ರಾಜಶೇಶ್‍ಬಾಬು, ಪೈಜಾನ್‍ಖಾನ್, ಹೇಮಂತ್‍ಕುಮಾರ್, ಪ್ರಮೋದ್ ನಿಂಬಾಳ್ಕರ್, ಚೆಲುವರಾಜ್ ನಾಯ್ಡು ನಿರ್ಮಿಸಿರುವ ಈ ಚಿತ್ರವನ್ನು ಪ್ರೇಕ್ಷಕ ಪ್ರಭುಗಳು ಯಾವ ರೀತಿ ನೋಡಿ ಸಂಕಷ್ಟವನ್ನು ನಿವಾರಣೆ ಮಾಡುತ್ತಾರೆ ಎಂಬುದನ್ನು ನೋಡ ಬೇಕಿದೆ.

Facebook Comments

Sri Raghav

Admin