ಬಿಹಾರದಲ್ಲಿ 29 ಬಾಲಕಿಯರ ರೇಪ್ ಪ್ರಕರಣ ಸಿಬಿಐ ತನಿಖೆಗೆ ಹಸ್ತಾಂತರ

ಈ ಸುದ್ದಿಯನ್ನು ಶೇರ್ ಮಾಡಿ

Gang-Rape--Case--01

ಪಾಟ್ನಾ, ಜು.26-ಬಿಹಾರದ ಮುಝಾಫರ್‍ಪುರ್ ಜಿಲ್ಲೆಯ ರಾಜ್ಯ ಸರ್ಕಾರದ ಆಶ್ರಯ ಗೃಹವೊಂದರಲ್ಲಿ 29 ಅಪ್ರಾಪ್ತೆಯರ ಮೇಲೆ ನಡೆದ ಅತ್ಯಾಚಾರ ಮತ್ತು ಶೋಷಣೆ ಪ್ರಕರಣಗಳ ಬಗ್ಗೆ ಕೇಂದ್ರೀಯ ತನಿಖಾ ದಳ(ಸಿಬಿಐ) ತನಿಖೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಶಿಫಾರಸು ಮಾಡಿದ್ದಾರೆ. ಇಡೀ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಈ ಕೃತ್ಯಗಳ ಕುರಿತು ಸಿಬಿಐ ತನಿಖೆಗೆ ಆದೇಶ ನೀಡಿರುವುದರಿಂದ ಇದರ ಹಿಂದಿರುವ ಸರ್ಕಾರದ ಅಧಿಕಾರಿಗಳೂ ಸೇರಿದಂತೆ ಅನೇಕ ಸಿಬ್ಬಂದಿ ಜೈಲು ಪಾಲಾಗುವ ಸಾಧ್ಯತೆ ಇದೆ.

ಇದು ಶೋಚನೀಯ ಘಟನೆ ಎಂದು ಬಣ್ಣಿಸಿರುವ ಮುಖ್ಯಮಂತ್ರಿಯವರ ಕಾರ್ಯಾಲಯ, ರಾಜ್ಯದಲ್ಲಿ ಈ ಸಂಬಂಧ ಸೃಷ್ಟಿಯಾಗಿರುವ ವದಂತಿ ವಾತಾವರಣದ ಸುದ್ದಿಗಳಿಗೆ ಕಡಿವಾಣ ಹಾಕಲು ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಈ ಪ್ರಕರಣವನ್ನು ಕೂಡಲೇ ಸಿಬಿಐ ತನಿಖೆಗೆ ಒಪ್ಪಿಸುವಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕರು ಹಾಗೂ ಗೃಹ ಇಲಾಖೆ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಆಶ್ರಯ ಗೃಹದಲ್ಲಿರುವ 42 ಬಾಲಕಿಯರಲ್ಲಿ 29 ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆಸಲಾಗಿದೆ ಅಥವಾ ಲೈಂಗಿಕವಾಗಿ ಶೋಷಣೆ ಮಾಡಲಾಗಿದೆ ಎಂಬುದು ವೈದ್ಯಕೀಯ ಪರೀಕ್ಷೆಗಳಿಂದ ದೃಢಪಟ್ಟಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಕೆ.ಎಸ್.ದ್ವಿವೇದಿ ತಿಳಿಸಿದ್ದಾರೆ. ಲೈಂಗಿಕ ದುರಾಚಾರ ವಿರೋಧಿಸಿದ ಬಾಲಕಿಯೊಬ್ಬಳನ್ನು ಕೊಂದು ಆಶ್ರಮ ನಿವಾಸದ ಆವರಣದಲ್ಲೇ ಹೂತು ಹಾಕಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿಯೂ ಸಿಬಿಐ ತನಿಖೆ ಮುಂದುವರಿಯಲಿದೆ.

ಈ ಕೃತ್ಯಗಳ ಸಂಬಂಧ ಆಶ್ರಯ ಗೃಹದ ನೌಕರರೂ ಸೇರಿದಂತೆ 10ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಅಧಿಕಾರಿಗಳು, ಆಶ್ರಮದ ಸಿಬ್ಬಂದಿಗಳೂ ಸೇರಿದಂತೆ ಹಲವರು ಶಾಮೀಲಾಗಿದ್ದು, ಇವರೆಲ್ಲರೂ ಆಡಳಿತರೂಢ ಪಕ್ಷಕ್ಕೆ ಆಪ್ತರಾಗಿದ್ದಾರೆ. ಹೀಗಾಗಿ ನಿಷ್ಪಕ್ಷಪಾತ ತನಿಖೆ ನಡೆಸಲು ಸಿಬಿಐಗೆ ವಹಿಸಲು ನಿತೀಶ್ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದರು.

Facebook Comments

Sri Raghav

Admin