ಮುಂದಿನ ಆರು ತಿಂಗಳಲ್ಲಿ 5000 ಹುದ್ದೆಗಳ ನೇಮಕ : ಸಚಿವ ಜಿ.ಟಿ.ದೇವೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

GT-Devegowda--01

ಬೆಂಗಳೂರು, ಜು.27- ಪ್ರಾಂಶುಪಾಲರು, ಬೋಧಕ ಸಿಬ್ಬಂದಿ ಸೇರಿದಂತೆ ಐದು ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 395 ಪದವಿ ಕಾಲೇಜುಗಳಲ್ಲಿ ಪ್ರಾಂಶುಪಾಲರಿಲ್ಲ. ಪದವಿ ಕಾಲೇಜುಗಳಿಗೆ ಸುಮಾರು 3800ರಷ್ಟು ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಈ ಸಂಬಂಧ ಹಣಕಾಸು ಇಲಾಖೆಯೊಂದಿಗೆ ಚರ್ಚೆ ನಡೆಸಿದ್ದು, ನೇಮಕಾತಿಗೆ ಸಂಬಂಧಿಸಿದಂತೆ ಹಣಕಾಸು ಇಲಾಖೆಯ ತಾತ್ವಿಕ ಒಪ್ಪಿಗೆ ದೊರೆತಿದ್ದು, ಮುಂದಿನ ಆರು ತಿಂಗಳಲ್ಲಿ 5ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಯಾವ ರೀತಿ ನೇಮಕಾತಿ ಮಾಡಬೇಕು ಎಂಬುದರ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಪದವಿ ಕಾಲೇಜುಗಳ ಬಿಎ ಕೋರ್ಸ್‍ಗೆ ವಿದ್ಯಾರ್ಥಿಗಳ ಬೇಡಿಕೆ ಗಣನೀಯವಾಗಿ ಕುಸಿತವಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಕಾಲೇಜಿನಲ್ಲೂ ಕೌಶಲ್ಯಾಭಿವೃದ್ಧಿ ಆಧಾರಿತ ಹೊಸ ವಿಷಯ ಅಥವಾ ಕೋರ್ಸ್ ಆರಂಭಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲಾಗುವುದು ಎಂದು ಹೇಳಿದರು.

ನಿರಂತರ ಸಭೆ:
ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಣೆ, ಪದವಿ ಕಾಲೇಜುಗಳಲ್ಲಿ ಮೂಲಸೌಲಭ್ಯ ಒದಗಿಸುವುದೂ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲು ಆ.1ರಿಂದ 3ರವರೆಗೆ ನಿರಂತರವಾಗಿ ಸರಣಿ ಸಭೆಗಳನ್ನು ನಡೆಸಲಾಗುವುದು ಎಂದು ಸಚಿವರು ಹೇಳಿದರು.ಆ.1ರಂದು ಉನ್ನತ ಶಿಕ್ಷಣ ಪರಿಷತ್ ಸಭೆ ನಡೆಸಲಿದ್ದು, ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳು ಪಾಲ್ಗೊಳ್ಳಲಿದ್ದಾರೆ. ಆ.2ರಂದು ವಿವಿಗಳ ಕುಲಪತಿಗಳು ಮತ್ತು ಕುಲಸಚಿವರ ಸಭೆ ನಡೆಸಲಾಗುವುದು. ಆ.3ರಂದು ಮೂಲಸೌಕರ್ಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಉನ್ನತ ಶಿಕ್ಷಣದಲ್ಲಿನ ಗುಣಮಟ್ಟದ ಸುಧಾರಣೆಗೆ ಒತ್ತು ನೀಡಲಿದ್ದು, ತಾಂತ್ರಿಕತೆ ಹಾಗೂ ನೈಪುಣ್ಯತೆ ಹೊಂದಿರುವ ಬೋಧಕ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು ಎಂದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಹಂಚಿಕೆ ಮಾಡಲಾಗಿದ್ದು, ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೂ ಲ್ಯಾಪ್‍ಟಾಪ್ ನೀಡುವ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ರಾಜ್ಯದ 102 ಪದವಿ ಕಾಲೇಜುಗಳಿಗೆ ಸ್ವಂತ ಕಟ್ಟಡಗಳಿಲ್ಲ. ಅಲ್ಲದೆ, ಬೋಧಕ ಸಿಬ್ಬಂದಿಯ ಕೊರತೆ ನೀಗಲು ಕಳೆದ ವರ್ಷ ನೇಮಕವಾಗಿದ್ದ 10,500 ಅತಿಥಿ ಉಪನ್ಯಾಸಕರನ್ನು ಮುಂದುವರೆಸಲಾಗುವುದು. ಜತೆಗೆ ಖಾಲಿ ಇರುವ ಹುದ್ದೆಗಳಿಗೆ ಮೆರಿಟ್ ಆಧಾರದ ಮೇಲೆ ಭರ್ತಿ ಮಾಡಲು ಸೂಚಿಸಲಾಗಿದೆ ಎಂದರು.
ಕಟ್ಟಡ ಮತ್ತು ಮೂಲಸೌಲಭ್ಯಕ್ಕಾಗಿ ರಾಜ್ಯ ಬಜೆಟ್‍ನಲ್ಲಿ 250 ಕೋಟಿ ರೂ. ವಿಶೇಷ ಅನುದಾನ ಒದಗಿಸಿದ್ದು, ಒಟ್ಟಾರೆ 750 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.  ನಬಾರ್ಡ್ ಮಾರ್ಗಸೂಚಿ ಪ್ರಕಾರ 160 ಕೋಟಿ ದೊರೆಯಲಿದೆ. ಆದರೆ, 300 ಕೋಟಿ ನೀಡುವಂತೆ ನಬಾರ್ಡ್ ಮುಂದೆ ಪ್ರಸ್ತಾಪಿಸಲಾಗಿದೆ. ವಿಶ್ವಬ್ಯಾಂಕ್‍ನಿಂದಲೂ ಹೆಚ್ಚಿನ ಅನುದಾನ ಪಡೆಯುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಜಿ.ಟಿ.ದೇವೇಗೌಡ ಹೇಳಿದರು.

ಕುಲಪತಿ ನೇಮಕಕ್ಕೆ ಚಾಲನೆ:
ರಾಜ್ಯದಲ್ಲಿ ಖಾಲಿ ಇರುವ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಕ್ಕೆ ಚಾಲನೆ ನೀಡಲಾಗುವುದು. ಇನ್ನೊಂದು ತಿಂಗಳೊಳಗೆ ಎಲ್ಲಾ ಕುಲಪತಿ ಹುದ್ದೆಗಳನ್ನು ನೇಮಕ ಮಾಡಲಾಗುವುದು. ನಮ್ಮ ಸರ್ಕಾರ ಬಂದ ಮೇಲೆ ಹೊಸದಾಗಿ ಕುಲಪತಿಗಳನ್ನು ನೇಮಕ ಮಾಡಿಲ್ಲ ಎಂದರು. ವಿವಿಗಳ ಸಿಂಡಿಕೇಟ್ ಸದಸ್ಯತ್ವಕ್ಕೆ ಅರ್ಹರನ್ನು ನೇಮಕ ಮಾಡಬೇಕೆಂದು ನಮ್ಮ ಉದ್ದೇಶವಾಗಿದೆ. ಈ ಹಿಂದೆ ಅರ್ಹರಲ್ಲದವರೂ ಕೂಡ ನೇಮಕವಾಗಿರುವ ನಿದರ್ಶನಗಳಿವೆ. ಆದಷ್ಟು ರಾಜಕೀಯ ನೇಮಕಾತಿಯನ್ನು ವಿವಿಯಲ್ಲಿ ತಡೆಯುವ ಪ್ರಯತ್ನ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.

ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಸುಮಾರು 9ಸಾವಿರ ವಿದ್ಯಾರ್ಥಿನಿಯರಿದ್ದು, ಮೂಲಸೌಲಭ್ಯದ ಕೊರತೆ ಇದೆ. ಸಾರ್ವಜನಿಕ ಬಳಕೆಗೆ ಮೀಸಲಿಟ್ಟ ನಿವೇಶನವನ್ನು ಪಡೆದು ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕೋರ್ಸ್‍ಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಕಾಲೇಜು ಸಂಕೀರ್ಣಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಜಿ.ಟಿ.ದೇವೇಗೌಡರು ತಿಳಿಸಿದರು. ಅಮವಾಸ್ಯೆ, ಪೂರ್ಣಿಮೆ, ಮಂಗಳವಾರದಂದು ಯಾವುದೇ ಕೆಲಸ ಆರಂಭಿಸಿದರೆ ಅಡೆತಡೆ ಇಲ್ಲದೆ ನಡೆಯುತ್ತವೆ ಎಂದು ಇದೇ ಸಂದರ್ಭದಲ್ಲಿ ಸಚಿವರು ತಿಳಿಸಿದರು.

Facebook Comments

Sri Raghav

Admin